ಸಮ್ಮಿಶ್ರ ಸರ್ಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಿದ್ಧ: ಜೆಡಿಎಸ್-ಕಾಂಗ್ರೆಸ್ ಸದಸ್ಯರ ಸಭೆ

 

ಬೆಂಗಳೂರು, ಜೂ.17-ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಿದ್ಧಪಡಿಸಲು ರಚಿಸಲಾಗಿರುವ ಸಮಿತಿಯ ಕಾಂಗ್ರೆಸ್ ಸದಸ್ಯರು ಇಂದು ಪ್ರಥಮ ಬಾರಿಗೆ ಸಭೆ ನಡೆಸಿದ್ದು, ಜೆಡಿಎಸ್ ಸದಸ್ಯರನ್ನೂ ಒಳಗೊಂಡಂತೆ ಪೂರ್ಣ ಪ್ರಮಾಣದ ಸಮಿತಿಯ ಸಭೆ ಬುಧವಾರ ಸಂಜೆ ನಡೆಯಲಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಮೊದಲು ಜೆಡಿಎಸ್ ಮತ್ತು ಕಾಂಗ್ರೆಸ್ ಪ್ರತ್ಯೇಕ ಪ್ರಣಾಳಿಕೆ ಪ್ರಕಟಿಸಿದ್ದವು. ಈ ಎರಡೂ ಪ್ರಣಾಳಿಕೆಯನ್ನು ಸೇರಿಸಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಆಯೋಜಿಸಲು ಐದು ಜನರ ಸಮಿತಿ ರಚಿಸಲಾಗಿದೆ. ಕಾಂಗ್ರೆಸ್‍ನಿಂದ ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ, ಆರ್.ವಿ.ದೇಶಪಾಂಡೆ ಸೇರಿದಂತೆ ನಾನು ಸದಸ್ಯರಾಗಿದ್ದೇವೆ. ಇಂದು ವೀರಪ್ಪಮೊಯ್ಲಿ ಅವರ ಮನೆಯಲ್ಲಿ ಸಮಿತಿಯ ಕಾಂಗ್ರೆಸ್ ಸದಸ್ಯರು ಮೊದಲ ಬಾರಿ ಭೇಟಿಯಾಗಿ ಚರ್ಚೆ ನಡೆಸಿದ್ದೇವೆ. ಜೆಡಿಎಸ್‍ನ ಸದಸ್ಯರಿಗೂ ಈ ಬಗ್ಗೆ ಮಾಹಿತಿ ನೀಡಿದ್ದೇವೆ.

ಇದೇ 20ರಂದು ಸಂಜೆ ಕುಮಾರಕೃಪಾದಲ್ಲಿ ಸಮಿತಿಯ ಸಭೆ ನಡೆಯಲಿದೆ. ಅಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ರೂಪಿಸಲಾಗುವುದು. ನಂತರ ಬಜೆಟ್ ಸೇರಿದಂತೆ ಇತರ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುಕೂಲವಾಗಲಿದೆ ಎಂದು ಆವರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ