ಕೆರಳಿಸಿ, ನರಳಿಸುವ ನರರೋಗ – ಮಲ್ಟಿಪಲ್ ಸ್ಕ್ಲೆರೋಸಿಸ್

ಮಲ್ಟಿಪಲ್ ಸ್ಕ್ಲೆರೋಸಿಸ್ ಎಂಬುದು ನರವ್ಯೂಹಕ್ಕೆ ಸಂಬಂಧಿಸಿದ ದೀರ್ಘಕಾಲಿಕ ಕೇಂದ್ರಿಯ ನರಮಂಡಲದ ಕಾಯಿಲೆ. ಮೆದುಳು ಬೆನ್ನುಹುರಿ ಮತ್ತು ಕಣ್ಣಿನ ನರಗಳನ್ನು ವಿಪರೀತವಾಗಿ ಕಾಡುವ ಈ ರೋಗ ಹೆಚ್ಚಾಗಿ ನಗರ ಪ್ರಾದೇಶಗಳ ಜನರಲ್ಲಿ ಕಂಡು ಬರುತ್ತದೆ.


ಪುರುಷರಿಗಿಂತ ಮಹಿಳೆಯರಿಗೇ ಜಾಸ್ತಿ ಬಾಧಿಸುವ ಈ ರೋಗ 20ರಿಂದ 50ರ ವಯಸ್ಸಿನವರಲ್ಲಿ ಹೆಚ್ಚು ಕಂಡು ಬರುತ್ತದೆ. ನಮ್ಮ ದೇಹದ ಎಲ್ಲಾ ನರಗಳ ಸುತ್ತ ಮಯೋಲಿನ್ ಎಂಬ ಕವಚವಿದ್ದು. ನರಗಳನ್ನು ರಕ್ಷಿಸುತ್ತದೆ. ಈ ರೋಗದಲ್ಲಿ ಮಯೋಲಿನ್ ಪದರಕ್ಕೆ ಹಾನಿಯಾಗಿ ನರಗಳ ಮಯೋಲಿನ್ ಪದರ ಕಳಚಿ ಹೋಗಿ ದೇಹದ ಇತರ ಭಾಗಗಳಿಗೆ ಸಂಪರ್ಕ ಮತ್ತು ಸಂವಹನ ಕಾರ್ಯದಲ್ಲಿ ನ್ಯೂನತೆ ಉಂಟಾಗುತ್ತದೆ.


2015ರಲ್ಲಿ ಜಾಗತಿಕವಾಗಿ 2.5 ಮಿಲಿಯನ್ ಮಂದಿ ಈ ರೋಗದಿಂದ ಬಳಲಿರುತ್ತಾರೆ ಮತ್ತು ಸರಾಸರಿ ವರ್ಷದಲ್ಲಿ ಜಾಗತಿಕವಾಗಿ 15ರಿಂದ 20 ಸಾವಿರದ ಮಂದಿ ಈ ರೋಗದಿಂದ ಸಾವನ್ನಪ್ಪುತ್ತಾರೆ. 1868ರಲ್ಲಿ ಜೀನ್ ಮಾರ್ಟಿನ್ ಚಾರ್ಕೊಟ್ ಎಂಬಾತ ಈ ರೋಗವನ್ನು ಗುರುತಿಸಿದನು.


ಮೆದುಳಿನ ಮತ್ತು ಬೆನ್ನು ಹುರಿಯ ಒಳಭಾಗದ ವೈಟ್‍ಮ್ಯಾಟರ್‍ನಲ್ಲಿ ಚಿಕ್ಕ ಚಿಕ್ಕ ಪ್ಲಾಕ್ ಅಥವಾ ಮಚ್ಚೆಯ ರೀತಿಯಲ್ಲಿ ಹಾಗೂ ಆಂಗ್ಲ ಭಾಷೆಯಲ್ಲಿ ಸ್ಕ್ಲಿರಾ ರೀತಿಯಲ್ಲಿ ಕಾಣಿಸುವುದರಿಂದ ಮಲ್ಟಿಪಲ್ ಸ್ಕ್ಲೆರೋಸಿಸ್ ಎಂಬ ಅನ್ವರ್ಥನಾಮ ಬಂದಿದೆ.

ಕಾರಣಗಳು ಏನು ?

 1. ವಂಶ ವಾಹಕ ಮತ್ತು ವಾತಾವರಣ ಕಾರಣಗಳು ಒಟ್ಟು ಸೇರಿ ಈ ರೋಗ ಬರುತ್ತದೆ.
 2. ದೇಹದ ರಕ್ಷಣಾ ವ್ಯವಸ್ಥೆಯಲ್ಲಿನ ವೈಪರೀತ್ಯ ಮತ್ತು ದೇಹದ ನರಮಂಡಲದ ವಿರುದ್ಧವೇ ದೇಹ ಆಂಟಿಬಾಡಿಗಳನ್ನು ಉತ್ಪತ್ತಿ ಮಾಡಿ ನರಗಳ ಮಯಲಿನ್ ಪದರವನ್ನು ಹಾಳುಗೆಡುತ್ತದೆ.
 3. ವೈರಾಣು ಸೋಂಕಿನಿಂದಾಗಿಯೂ ನರವ್ಯೂಹದ ಮೇಲೆ ಪರಿಣಾಮ ಬೀರಿ ನರಗಳ ಕವಚ ಕಳಚಿ ಹೋಗುತ್ತದೆ.
 4. ಕಲುಷಿತ ವಾತಾವರಣ, ಅಶುದ್ಧ ಗಾಳಿ, ಮಾನಸಿಕ ಒತ್ತಡ ಇವೆಲ್ಲವೂ ಮೈಳೈಸಿ ನರಮಂಡಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ನರಗಳ ಕವಚವಾದ ಮಯೋಲಿನ್ ಪದರ ಹಾಳಾಗಿ ರೋಗಕ್ಕೆ ಮುನ್ನುಡಿ ಬರೆಯುತ್ತದೆ.
 5. ವಿಟಮಿನ್ ಡಿ ಕೊರತೆ ದೈಹಿಕ ಪರಿಶ್ರಮದ ಕೊರತೆಯಿಂದಲೂ ಈ ರೋಗ ಬರುವ ಸಾಧ್ಯತೆ ಇರುತ್ತದೆ.
 6. ಧೂಮಪಾನ, ಅತಿಯಾದ ರಸದೂತಗಳ ಬಳಕೆಯಿಂದಲೂ ರೋಗ ಬರುವ ಸಾಧ್ಯತೆ ಇದೆ.

ರೋಗ ಲಕ್ಷಣಗಳು ಏನು ?

 1. ದೃಷ್ಟಿ ಮಂಕಾಗುವುದು, ಎರಡೆರಡು ವಸ್ತುಗಳು ಕಾಣುವುದು, ದೃಷ್ಟಿಹೀನತೆ ಕಣ್ಣುನೊಳಗೆ ನಿರಂತರ ಯಾತನೆ ನೋವು.
 2. ವಿಪರೀತ ಸುಸ್ತು, ಕ್ಷಿಣತೆ, ಮಾನಸಿಕ ಉದ್ವೇಗ, ಸಂವಹನ ಕೊರತೆ, ಮೂಡ್ ಬದಲಾವಣೆ, ದೇಹ ಅಸಮತೋಲನ ಕಾಣಿಸಿಕೊಳ್ಳುತ್ತದೆ.
 3. ಮಾತನಾಡುವಾಗ ತೊದಲುವುದು, ನುಂಗುವಾಗ ಗಂಟಲಿನಲ್ಲಿ ನೋವು, ಸ್ನಾಯುಗಳಲ್ಲಿ ನೋವು, ಸ್ನಾಯು ಹಿಡಿದಂತಾಗುವುದು ಮತ್ತು ಸ್ನಾಯು ಸೆಳೆತ ಕಾಣಿಸಿಕೊಳ್ಳುತ್ತದೆ.
 4. ಕೈ-ಕಾಲು ಜೋಮು ಹಿಡಿದಂತಾಗುವುದು, ದೇಹದ ಯಾವುದೇ ಭಾಗ ಮರಗಟ್ಟುವುದು, ಅಲ್ಲಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
 5. ಭೇದಿ ಮತ್ತು ಮಲ್ಲಬದ್ಧತೆ ಎರಡೂ ಉಂಟಾಗುತ್ತದೆ. ಮೂತ್ರಚೀಲ ಅಥವಾ ಬ್ಲಾಡರ್ ತನ್ನ ಕಾರ್ಯ ಸ್ಥಗಿತಗೊಳಿಸುತ್ತದೆ. ಮೂತ್ರ ಬಂದಂತೆ ಆಗುತ್ತದೆ ಆದರೆ ಮೂತ್ರ ವಿಸರ್ಜನೆ ಮಾಡಲು ಕಷ್ಟವಾಗುತ್ತದೆ.
 6. ಮುಖದಲ್ಲಿ ಅಲ್ಲಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಎದುರಿನ ವ್ಯಕ್ತಿಯನ್ನು ಗುರುತಿಸಲು ಕಷ್ಟವಾಗುತ್ತದೆ. ಮತ್ತು ನಡೆದಾಡಲು ತೊಂದರೆಯಾಗುತ್ತದೆ.
 7. ಕುತ್ತಿಗೆಯನ್ನು ಹಿಂದೆ ಮುಂದೆ ಭಾಗಿಸಿದಾಗ ಬೆನ್ನಿನ ಹುರಿಯಲ್ಲಿ ಕರೆಂಟ್ ಶಾಕ್ ಹೊಡೆದಂತೆ ಅನುಭವ ಉಂಟಾಗುತ್ತದೆ. ಬಿಸಿಲು ಮತ್ತು ತಂಪು ಹವೆಗೆ ಮೈಯೊಡ್ಡಿದಾಗ ಮೇಲೆ ತಿಳಿಸಿದ ಎಲ್ಲಾ ಚಿಹ್ನೆಗಳು ಮತ್ತು ಸಂಕಟಗಳು ಮತ್ತಷ್ಟು ತೀವ್ರವಾಗುತ್ತದೆ.

ಪತ್ತೆ ಹಚ್ಚುವುದು ಹೇಗೆ :

ಮೆಕ್‍ಡೊನಾಡ್ಸ್ ಕ್ರೈಟೀರಿಯಾದ ಮುಖಾಂತರ ರೋಗದ ಲಕ್ಷಣಗಳು, ಲ್ಯಾಬ್ ಪರೀಕ್ಷೆಯ ಫಲಿತಾಂಶ ಮತ್ತು ಮೆದುಳು ಸ್ಕಾನ್‍ನ ರಿಪೋರ್ಟ್‍ನ್ನು ತಾಳೆ ಹಾಕಿ ರೋಗ ನಿರ್ಣಯ ಮಾಡಲಾಗುತ್ತದೆ. ಮೆದುಳಿನ ಎಂ.ಆರ್.ಐ. ಸ್ಕ್ಯಾನ್ ಮೂಲಕ ರೋಗವನ್ನು sಸುಲಭವಾಗಿ ಪತ್ತೆ ಹಚ್ಚಲಾಗುತ್ತದೆ. ಬೆನ್ನು ಹುರಿ ಮತ್ತು ಮೆದುಳಿನ ಒಳಭಾಗದಲ್ಲಿ ನರಗಳ ರಚನೆ ಮತ್ತು ನರಗಳ ಕವಚವಾದ “ಮಯಲಿನ್” ಪದರದ ರಚನೆಯಲ್ಲಿನ ದೋಷಗಳನ್ನು ಗುರುತಿಸಿ ರೋಗ ಪತ್ತೆ ಹಚ್ಚಲಾಗುತ್ತದೆ. ಸಾಮಾನ್ಯವಾಗಿ ಸ್ಕ್ಯಾನ್ ಮಾಡುವ ಸಂದರ್ಭದಲ್ಲಿ ಗಾಡೋಅನಿಯಮ್ ಎಂಬ ವಸ್ತುವನ್ನು ರಕ್ತನಾಳದೊಳಗೆ ಕಳುಹಿಸಿ ಆ ಬಳಿಕ ಸ್ಕ್ಯಾನ್ ಮಾಡಲಾಗುತ್ತದೆ. ಆ ಮೂಲಕ ನರಗಳ ಸಂಪೂರ್ಣ ರಚನೆಯಲ್ಲಿನ ನ್ಯೂನತೆಯನ್ನು ಪತ್ತೆ ಹಚ್ಚುತ್ತಾರೆ. ಇದರ ಜೊತೆಗೆ ರಕ್ತ ಪರೀಕ್ಷೆ ಅSಈ ದ್ರಾವಣದ ಪರೀಕ್ಷೆ ಮಾಡಿ ರೋಗವನ್ನು ನಿಖರವಾಗಿ ಕಂಡು ಹಿಡಿಯುತ್ತಾರೆ.

ಚಿಕಿತ್ಸೆ ಹೇಗೆ?

ಈ ರೋಗವನ್ನು ಸಂಪೂರ್ಣವಾಗಿ ಗುಣಪಡಿಸುವ ಔಷಧಿ ಯಾವುದೂ ಇಲ್ಲದಿದ್ದರೂ, ರೋಗದ ಲಕ್ಷಣಗಳು ಮತ್ತು ತೀವ್ರತೆಯನ್ನು ಕಡಿಮೆ ಮಾಡುವ ಔಷಧಿಗಳು ಇವೆ. ರೋಗದ ತೀವ್ರತೆಯನ್ನು ಕಡಿಮೆ ಮಾಡಲು ಮತ್ತು ನರಗಳ ಉರಿಯೂತವನ್ನು ಕಡಿಮೆ ಮಾಡಲು ಹೆಚ್ಚಾಗಿ ರಕ್ತನಾಳಗಳ ಮೂಲಕ ‘ಸ್ಪಿರಾಯ್ಡ್’ ಔಷಧಿ ನೀಡಲಾಗುತ್ತಿದೆ. ಉರಿಯೂತದಿಂದ ಕೆರಳಿದ ನರಗಳನ್ನು ಈ ಸ್ಟಿರಾಯ್ಡ್ ಸಮಾಧಾನಪಡಿಸುತ್ತದೆ. ರೋಗದ ತೀವ್ರತೆ ಕಡಿಮೆಯಾದ ಬಳಿಕ ಬಾಯಿಯ ಮುಖಾಂತರ ಸ್ಟಿರಾಯ್ಡ್ ಗುಳಿಗೆಯನ್ನು ನೀಡುತ್ತಾರೆ. ರೋಗದ ತೀವ್ರತೆಯನ್ನು ಮತ್ತು ರೋಗದ ಮುಂದುವರಿಕೆಯನ್ನು ಕುಗ್ಗಿಸಲು ಇಂಟರ್‍ಫೆರಾನ್ ಎಂಬ ಔಷದಿಯನ್ನು ನೀಡಲಾಗುತ್ತದೆ. ಈ ಚಿಕಿತ್ಸೆಯ ಜೊತೆಗೆ ಪೋಷಾಕಾಂಶಯುಕ್ತ ಆಹಾರ, ವಿಟಮಿನ್ ‘ಡಿ’ ಸೇವನೆ, ಮನಸ್ಸಿಗೆ ಮುದ ನೀಡುವ ಯೋಗ, ಸಂಗೀತ ಕೇಳುವಿಕೆ, ಮಾನಸಿಕ ನೆಮ್ಮದಿಯನ್ನು ಹೆಚ್ಚಿಸುವ ಧ್ಯಾನ ಪ್ರಣಾಯಾಮ ಮುಂತಾದವುಗಳನ್ನು ಕೂಡ ಮಾಡಲಾಗುತ್ತದೆ. ಈ ಚಿಕಿತ್ಸೆಗೆ ಯಾವ ರೀತಿಯಿಂದಲೂ ವೈಜ್ಞಾನಿಕ ಪುರಾವೆ ಇಲ್ಲದಿದ್ದರೂ, ಈ ರೀತಿಯ ಚಿಕಿತ್ಸೆಯಿಂದ ಯಾವುದೇ ದುಷ್ಪರಿಣಾಮವಿರುವುದಿಲ್ಲ. ಇವೆಲ್ಲದರ ಜೊತೆಗೆ ರೋಗಿಗೆ ಸಾಂತ್ವನ ಹೇಳಿ ಮಾನಸಿಕ ಧೈರ್ಯ ನೀಡಿ ಸಮಾಜದ ಮುಖ್ಯವಾಹಿನಿಗೆ ಸೇರಿಸಿಕೊಳ್ಳುವುದು ಅತೀ ಅವಶ್ಯಕ

ಈ ಲೇಖನದ ಬಗ್ಗೆ ಹೆಚ್ಚು ಮಾಹಿತಿಗಾಗಿ ಇಲ್ಲಿ ಭೇಟಿ ನೀಡಿ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ