ಸಂಪಾದಕ ಶುಜಾತ್ ಬುಖಾರಿ ಹತ್ಯೆ: ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ

ನವದೆಹಲಿ/ಶ್ರೀನಗರ, ಜೂ.16-ರೈಸಿಂಗ್ ಕಾಶ್ಮೀರ್ ದಿನಪತ್ರಿಕೆಯ ಮುಖ್ಯ ಸಂಪಾದಕ ಶುಜಾತ್ ಬುಖಾರಿ ಮತ್ತು ಯೋಧ ಔರಂಗಬೇಬ್ ಹತ್ಯೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಭಯೋತ್ಪಾದಕರ ದಮನಕ್ಕೆ ಸಜ್ಜಾಗುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಬುಖಾರಿ ಮತ್ತು ಔರಂಗಬೇಬ್ ಹತ್ಯೆ ಪ್ರಕರಣಗಳ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿ ಬೂದಿ ಮುಚ್ಚಿದ ಕೆಂಡದಂಥ ವಾತಾವರಣವಿದೆ. ಕಣಿವೆ ರಾಜ್ಯದಲ್ಲಿ ಉದ್ಭವಿಸಿರುವ ಪರಿಸ್ಥಿತಿ ಹಾಗೂ ಉಗ್ರರ ದಾಳಿಗಳು ಹೆಚ್ಚಾಗುತ್ತಿರುವ ಪ್ರಕರಣಗಳಿಂದ ತೀವ್ರ ಒತ್ತಡಕ್ಕೆ ಸಿಲುಕಿರುವ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಗೃಹ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಮಹತ್ವದ ಸಮಾಲೋಚನೆ ನಡೆಸಿದರು.
ಒಂದು ಗಂಟೆಗಳ ಸಮಾಲೋಚನೆ ನಡೆಸಿದ ಮೋದಿ ಮತ್ತು ರಾಜನಾಥ್ ಪಾಕಿಸ್ತಾನಿ ಬೆಂಬಲಿತ ಉಗ್ರಗಾಮಿ ಸಂಘಟನೆಗಳು ಹಾಗೂ ಭಯೋತ್ಪಾದಕರನ್ನು ನಿಗ್ರಹಿಸಲು ಕಾರ್ಯಾಚರಣೆ ತೀವ್ರಗೊಳಿಸುವ ಬಗ್ಗೆ ಚರ್ಚಿಸಿದರು ಎಂದು ಮೂಲಗಳು ಹೇಳಿವೆ.
ಭದ್ರತಾ ಪಡೆಗಳನ್ನು ಗುರಿಯಾಗಿಟ್ಟುಕೊಂಡು ಉಗ್ರರು ದಾಳಿಗಳನ್ನು ತೀವ್ರಗೊಳಿಸಿರುವ ಬಗ್ಗೆಯೂ ಸಭೆಯಲ್ಲಿ ಗಹನ ಚರ್ಚೆ ನಡೆಯಿತು.
ಸಭೆಯಲ್ಲಿ ಭಾಗವಹಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಪ್ರಧಾನಿ ಮತ್ತು ಗೃಹ ಸಚಿವರನ್ನು ಒತ್ತಾಯಿಸಿದರು ಎಂದು ತಿಳಿದು ಬಂದಿದೆ.
ಶ್ರೀನಗರದಲ್ಲಿ ಹಿರಿಯ ಪತ್ರಕರ್ತ ಬುಖಾರಿ ಮತ್ತು ಅವರ ಇಬ್ಬರು ಅಂಗರಕ್ಷಕರನ್ನು ಉಗ್ರರು ಹತ್ಯೆ ಮಾಡಿ ಪರಾರಿಯಾದರು. ಈ ಘಟನೆ ಹಿಂದೆ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್‍ಐ ಕೈವಾಡವಿದ್ದು, ಅದರ ಕುಮ್ಮಕ್ಕಿನಿಂದ ಲಷ್ಕರ್-ಎ-ತೈಬಾ ಉಗ್ರಗಾಮಿ ಸಂಘಟನೆ ಈ ಕೃತ್ಯ ಎಸಗಿದೆ ಎಂಬ ಬಲವಾದ ಶಂಕೆ ಇದೆ.
ಬುಖಾರಿ ಹತ್ಯೆಗೆ ಸಂಬಂಧಿಸಿದಂತೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಕಾಶ್ಮೀರದ ಪುಲ್ವಾಮಾದಲ್ಲಿ ಔರಂಗಜೇಬ್ ಎಂಬ ಯೋಧನನ್ನು ಉಗ್ರರು ಅಪಹರಿಸಿ ಚಿತ್ರಹಿಂಸೆ ನೀಡಿ ಕೊಂದಿದ್ದರು. ಈ ಪ್ರಕರಣವನ್ನೂ ಸಹ ಕೇಂದ್ರ ಗಂಭೀರವಾಗಿ ಪರಿಗಣಿಸಿ, ಉಗ್ರರನ್ನು ಮಟ್ಟ ಹಾಕುವ ಕಾರ್ಯಾಚರಣೆ ಬಗ್ಗೆ ಗಂಭೀರ ಚಿಂತನೆ ನಡೆಸಿದೆ.
ಈ ಮಧ್ಯೆ, ಅಪಹರಣಕ್ಕೆ ಒಳಗಾಗಿ ಚಿತ್ರಹಿಂಸೆ ನೀಡಿ ಕೊಲ್ಲಲ್ಪಡುವುದಕ್ಕೂ ಮುನ್ನ ಔರಂಗಬೇಬ್‍ನನ್ನು ಉಗ್ರರು ವಿವಿಧ ಪ್ರಶ್ನೆಗಳನ್ನು ಕೇಳಿರುವ ವೀಡಿಯೋ ಬಹಿರಂಗಗೊಂಡಿದೆ. ಯೋಧನನ್ನು ಚಿತ್ರಹಿಂಸೆ ಗುರಿಪಡಿಸಿದ ದೃಶ್ಯಗಳು ಇದರಲ್ಲಿವೆ.
ಅಪಾರ ಜನಸಾಗರದ ನಡುವೆ ಇಂದು ಪೂಂಚ್‍ನಲ್ಲಿ ರಾಷ್ಟ್ರೀಯ ರೈಫಲ್ಸ್ ಯೋಧನ ಅಂತಕ್ರಿಯೆ ನಡೆಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ