ಗೌರಿ ಲಂಕೇಶ್‌ ಹತ್ಯೆ ಪ್ರಕರಣ: ಆರೋಪಿ ವಾಗ್ಮೋರೆ ಕುಟುಂಬಕ್ಕೆ ನೆರವು ಕೋರಿ ಶ್ರೀರಾಮಸೇನೆ ಫೇಸ್ ಬುಕ್ ನಲ್ಲಿ ಮನವಿ

ವಿಜಯಪುರ:ಜೂ-16: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಬಂಧಿಸಿರುವ ಸಿಂದಗಿಯ ಪರಶುರಾಮ ವಾಘ್ಮೋರೆ ಕುಟುಂಬಕ್ಕೆ ನೆರವು ಕೋರಿ, ಫೇಸ್‌ಬುಕ್‌ನಲ್ಲಿ ಹಾಕಿರುವ ಪೋಸ್ಟ್‌ ಈಗ ವೈರಲ್ ಆಗಿದೆ.

ಶ್ರೀರಾಮಸೇನಾ ಕರ್ನಾಟಕ ಸಂಘಟನೆಯು ತನ್ನ ಫೇಸ್‌ಬುಕ್‌ ಖಾತೆಯಲ್ಲಿ ‘ನಿಮ್ಮ ದುಡಿಮೆಯ ಒಂದು ಭಾಗ, ನಿಮ್ಮ ಅನ್ನದ ಒಂದು ತುತ್ತನ್ನು ದೇಶಭಕ್ತರಿಗೆ ಕೊಡಲಾರಿರಾ ? ಪರಶುರಾಮ ವಾಘ್ಮೋರೆ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದ್ದು, ದಯವಿಟ್ಟು ಹಣದ ಸಹಾಯ ಮಾಡಬೇಕೆಂದು ಕಳಕಳಿಯ ವಿನಂತಿ’ ಎಂಬ ಪೋಸ್ಟ್‌ ಅನ್ನು ಹ್ಯಾಷ್‌ ಟ್ಯಾಗ್‌ನೊಂದಿಗೆ ಅಪ್‌ಲೋಡ್‌ ಮಾಡಿದೆ.

ಈ ಫೇಸ್‌ಬುಕ್‌ ಅಕೌಂಟ್‌ಗೆ 72599 41200 ಸಂಖ್ಯೆ ಲಿಂಕ್ ಆಗಿದೆ. ನೆರವಿನ ಹಣವನ್ನು ಯಾರ ಖಾತೆಗೆ ಹಾಕಬೇಕೆಂಬ ವಿವರವನ್ನೂ ನೀಡಲಾಗಿದೆ. ಈ ಪೋಸ್ಟ್‌ ಅಪ್‌ಲೋಡ್‌ ಮಾಡಿದ ಕೆಲ ಗಂಟೆಗಳಲ್ಲೇ 308 ಮಂದಿ ಲೈಕ್‌ ಮಾಡಿದ್ದರೆ, 20 ಮಂದಿ ಕಾಮೆಂಟ್‌ ಹಾಕಿದ್ದಾರೆ. 192 ಮಂದಿ ಹಂಚಿಕೊಂಡಿದ್ದಾರೆ. ಕಾಮೆಂಟ್‌ ಬಾಕ್ಸ್‌ನಲ್ಲಿ ಕೆಲವರು ಹಣ ಹಾಕಿರುವ ರಸೀದಿಯನ್ನು ಹಾಕಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ, ವಿಚಾರಣೆಗೆ ಹಾಜರಾಗುವಂತೆ ಶ್ರೀರಾಮಸೇನೆಯ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ, ಸಿಂದಗಿಯ ರಾಕೇಶ ಮಠ ಅವರಿಗೆ ಎಸ್‌ಐಟಿ ನೋಟಿಸ್‌ ನೀಡಿದೆ. ನೋಟಿಸ್‌ ತಲುಪಿದ್ದು, ಶನಿವಾರ ವಿಚಾರಣೆಗಾಗಿ ಹಾಜರಾಗುವುದಾಗಿ ರಾಕೇಶ ತಿಳಿಸಿದ್ದಾರೆ.

ಬಂಧಿತ ಪರಶುರಾಮ ವಾಘ್ಮೋರೆ ತಂದೆ ಅಶೋಕ ವಾಘ್ಮೋರೆ, ಸೋದರ ಮಾವ ಅಶೋಕ ಕಾಂಬ್ಳೆ ಅವರಿಗೆ ಹಣಕಾಸಿನ ತೊಂದರೆ ಇದ್ದು, ಎಸ್‌ಐಟಿ ಸೂಚನೆ ಪ್ರಕಾರ ಅವರಿಗೆ ಸಕಾಲಕ್ಕೆ ಬೆಂಗಳೂರಿಗೆ ತೆರಳಲು ಆಗಿಲ್ಲ. ಹೀಗಾಗಿ ಅವರನ್ನೂ ನನ್ನ ಜತೆಯಲ್ಲೇ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿರುವೆ ಎಂದು ತಿಳಿಸಿದ್ದಾರೆ.

Gouri lankesh murder case,parashuram Vaughmore, sriramasena karnataka

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ