ಉಗ್ರರಿಂದ ಅಪಹರಣಕ್ಕೊಳಗಾದ ಯೋಧ ಔರಂಗಜೇಬ್‌ ಶವವಾಗಿ ಪತ್ತೆ 

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನಲ್ಲಿ ಔರಂಗಜೇಬ್‌ ಎಂಬ ಯೋಧರೊಬ್ಬರನ್ನು ಉಗ್ರಗಾಮಿಗಳು ಗುರುವಾರ ಅಪಹರಿಸಿ ಹತ್ಯೆ ಮಾಡಿದ್ದಾರೆ.

ಗುಂಡಿನಿಂದ ಛಿದ್ರಗೊಂಡ ಅವರ ದೇಹ ಪುಲ್ವಾಮಾ ಜಿಲ್ಲೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಜೌರಿ ನಿವಾಸಿಯಾಗಿರುವ ಅವರು ರಂಜಾನ್‌ ರಜೆಗಾಗಿ ಮನೆಗೆ ಆಗಮಿಸಿದ್ದರು. ಅವರನ್ನು ಲಾಂಪೋರಾದಿಂದ ಅಪಹರಿಸಿದ್ದರು.

ಶೋಪಿಯಾನ್‌ನಲ್ಲಿ 44 ರೈಫ‌ಲ್ಸ್‌ ಪಡೆಯಲ್ಲಿ ಇವರು ಕಾರ್ಯನಿರ್ವಹಿಸುತ್ತಿದ್ದರು. ಶೋಧಕ್ಕಾಗಿ ವ್ಯಾಪಕ ಕಾರ್ಯಾಚರಣೆಯನ್ನು ನಡೆಸಲಾಗಿತ್ತು.

ಹಿಜ್ಬುಲ್‌ ಕಮಾಂಡರ್‌ ಸಮೀರ್‌ ಟೈಗರ್‌ ನನ್ನು ಹತ್ಯೆಗೈದ ಹಿರಿಯ ಸೇನಾಧಿಕಾರಿಯ ಪಡೆಯಲ್ಲಿ ಔರಂಗಜೇಬ್‌ ಕಾರ್ಯನಿರ್ವಹಿಸಿದ್ದರು. ಹೀಗಾಗಿ ಇದೇ ಕಾರಣಕ್ಕೆ ಔರಂಗಜೇಬ್‌ರನ್ನು ಅಪಹರಿಸಿ ಹತ್ಯೆಗೈಯಲಾಗಿದೆಯೇ ಎಂಬುದಾಗಿ ತನಿಖೆ ನಡೆಸಲಾಗುತ್ತಿದೆ. ರಜೆ ಮೇಲೆ ಮನೆಗೆ ತೆರಳುತ್ತಿದ್ದಾಗ ಔರಂಗಜೇಬ್‌ರನ್ನು ಅಪಹರಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಮಂಗಳವಾರ ಶಾಡಿಮಾರ್ಗ್‌ ಸೇನಾ ನೆಲೆಯ ಬಳಿ ಪ್ರಯಾಣಿಕ ವಾಹನವನ್ನೇರಿ ಔರಂಗಜೇಬ್‌ ಹೊರಟಿದ್ದರು. ಕೇವಲ ಎರಡು ಕಿ.ಮೀ ದೂರದಲ್ಲಿ ಸಶಸ್ತ್ರಧಾರಿ ಉಗ್ರ ವಾಹನವನ್ನು ತಡೆದು, ಯೋಧರನ್ನು ಅಪಹರಿಸಿದ್ದಾರೆ. ಅಪಹರಣದ ಸುದ್ದಿ ತಿಳಿಯುತ್ತಿದ್ದಂತೆ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ಕಳೆದ ವರ್ಷ ಲೆ. ಉಮರ್‌ ಫ‌ಯಾಜ್‌ರನ್ನು ಕೂಡ ಅಪಹರಿಸಿ ಹತ್ಯೆಗೈಯಲಾಗಿತ್ತು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ