ಅಗರ್ತಲಾ/ಇಂಫಾಲ/ಗುವಾಹತಿ, ಜೂ.15-ಈಶಾನ್ಯ ಪ್ರಾಂತ್ಯದ ಮೂರು ರಾಜ್ಯಗಳಲ್ಲಿ ಭಾರೀ ಮಳೆ, ಪ್ರವಾಹ ಹಾಗೂ ಭೂಕುಸಿತದಿಂದ 9 ಮಂದಿ ಮೃತಪಟ್ಟು, ಸಹಸ್ರಾರು ಮಂದಿ ನಿರಾಶ್ರಿತರಾಗಿದ್ದಾರೆ.
ತ್ರಿಪುರ, ಮಣಿಪುರ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಕಳೆದ 48 ಗಂಟೆಗಳ ಅವಧಿಯಲ್ಲಿ ಜಲಪ್ರಳಯದಿಂದಾಗಿ ಒಂಭತ್ತು ಮಂದಿ ಮೃತಪಟ್ಟಿದ್ದಾರೆ. ರೈಲುಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ತ್ರಿಪುರದ ಖೋವೈ ಜಿಲ್ಲೆ ಮತ್ತು ದಕ್ಷಿಣ ತ್ರಿಪುರ ಜಿಲ್ಲೆಯಲ್ಲಿ ಮನು ನದಿಯಲ್ಲಿ ಮೂವರು ಕೊಚ್ಚಿ ಹೋಗಿ ಜಲಸಮಾಧಿಯಾಗಿದ್ದರೆ. ಇನ್ನೊಬ್ಬರು ಭೂಕುಸಿತದಿಂದ ಮೃತಪಟ್ಟಿದ್ದಾರೆ. ಈ ರಾಜ್ಯದ ಅನೇಕ ಭಾಗಗಳಲ್ಲಿ ಕುಂಭದ್ರೋಣ ಮಳೆಯಿಂದ ಜಲ ಪ್ರಳಯ ಸೃಷ್ಟಿಯಾಗಿದ್ದು, ಸಹಸ್ರಾರು ಮಂದಿ ಸಂತ್ರಸ್ತರಾಗಿದ್ದಾರೆ. ಮಣಿಪುರದಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ ಸಾವು-ನೋವು ಸಂಭವಿಸಿದೆ. 13,000 ಜನರನ್ನು 200 ಪರಿಹಾರ ಶಿಬಿರಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ರಾಜ್ಯದ ವಿವಿಧೆಡೆ 50,000ಕ್ಕೂ ಹೆಚ್ಚು ಮಂದಿ ನಿರ್ವಸತಿಗರಾಗಿದ್ಧಾರೆ. ಅಸ್ಸಾಂನಲ್ಲೂ ವರುಣನ ಆರ್ಭಟದಿಂದ ಸಾವು-ನೋವು ಸಂಭವಿಸಿದೆ. ಏಳು ಜಿಲ್ಲೆಗಳ 1.6 ಜನರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.