ಚಂಡಿಗಢ, ಜೂ.15- ರಾಜಧಾನಿ ದೆಹಲಿ ನಂತರ ಈಗ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳು ಧೂಳು ಮಿಶ್ರಿತ ವಿಷಮ ಗಾಳಿಯಿಂದ ತತ್ತರಿಸುತ್ತಿವೆ. ಈ ಎರಡೂ ರಾಜ್ಯಗಳಲ್ಲಿ ಧೂಳು ಮುಸುಕಿದ ವಾತಾವರಣದಿಂದ ವಿಮಾನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಧೂಳು ತುಂಬಿದ ವಾತಾವರಣದಿಂದಾಗಿ ಮಬ್ಬು ನೋಟದಿಂದಾಗಿ ನಿನ್ನೆ 30 ವಿಮಾನಗಳನ್ನು ರದ್ದುಗೊಳಿಸಲಾಗಿತ್ತು. ಇಂದು ಕೂಡ ಕೆಲವು ವಿಮಾನಗಳ ಹಾರಾಟ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಟುವಂತಾಯಿತು.
ಧೂಳು ತುಂಬಿ ವಾತಾವರಣದಿಂದ ವಾಯು ಮಲೀನವಾಗಿದ್ದು, ಸಾರ್ವಜನಿಕರು ಕಿರಿಕಿರಿ ಅನುಭವಿಸುತ್ತಿದ್ದಾರೆ.
ಈ ಮಧ್ಯೆ, ರಾಜಧಾನಿ ದೆಹಲಿಯಲ್ಲಿ ನಾಲ್ಕನೆ ದಿನವಾದ ಇಂದು ಕೂಡ ವಾಯು ಗುಣಮಟ್ಟ ತೀವ್ರ ಹದಗೆಟ್ಟ ಪರಿಸ್ಥಿತಿಯಲ್ಲೇ ಮುಂದುವರಿದಿದೆ. ಇನ್ನೂ 3-4 ದಿನ ಇದೇ ಸ್ಥಿತಿ ಇರಲಿದ್ದು, ದೀರ್ಘಕಾಲ ಹೊರಗಡೆ ಇರುವುದನ್ನು ಆದಷ್ಟೂ ಕಡಿಮೆ ಮಾಡುವಂತೆ ದೆಹಲಿ ನಿವಾಸಿಗಳಿಗೆ ಸಲಹೆ ಮಾಡಲಾಗಿದೆ.
ರಾಜಸ್ತಾನ ಸೇರಿದಂತೆ ಪಶ್ಚಿಮ ಭಾರತದ ವಿವಿಧ ರಾಜ್ಯಗಳ ಮೇಲೆ ಇತ್ತೀಚೆಗೆ ಅಪ್ಪಳಿಸಿದ ವಿನಾಶಕಾರಿ ಧೂಳು ಬಿರುಗಾಳಿ ಪರಿಣಾಮ ದೆಹಲಿಯಲ್ಲಿ ಮತ್ತೆ ವಾಯು ಮಾಲಿನ್ಯ ಗಂಭೀರ ಸ್ವರೂಪದಲ್ಲೇ ಮುಂದುವರಿದಿದೆ.