ಬೆಂಗಳೂರು,ಜೂ.15-ಹಿರಿಯ ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆಗೈಯಲು ನಾಲ್ವರು ದುಷ್ಕರ್ಮಿಗಳ ತಂಡ ಕಳೆದ ಒಂದು ವರ್ಷದಿಂದ ವ್ಯವಸ್ಥಿತ ಯೋಜನೆ ರೂಪಿಸಿದ್ದರು ಎಂಬುದನ್ನು ವಿಶೇಷ ತನಿಖಾ ತಂಡದ (ಎಸ್ಐಟಿ) ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಸದ್ಯ ಎಸ್ಐಟಿ ವಶದಲ್ಲಿರುವ ಗೌರಿ ಹತ್ಯೆಯ ಪ್ರಮುಖ ರೂವಾರಿ ಎನ್ನಲಾದ ಪರಶುರಾಮ್ ವಾಘ್ಮೋರೆ ಬಾಯಿಬಿಟ್ಟಿರುವಂತೆ ಒಂದು ವರ್ಷದ ಹಿಂದೆಯೇ ಕೊಲೆ ಮಾಡಲು ಯೋಜನೆ ರೂಪಿಸಿದ್ದಾಗಿ ಹೇಳಿದ್ದಾನೆ ಎಂದು ತಿಳಿದುಬಂದಿದೆ.
ಹಿಂದೂ ಧರ್ಮ ಹಾಗೂ ಈ ಧರ್ಮದ ಆಚಾರ-ವಿಚಾರಗಳನ್ನು ಉಗ್ರವಾಗಿ ತನ್ನ ಪತ್ರಿಕೆಯಲ್ಲಿ ಟೀಕೆ ಮಾಡುತ್ತಿದ್ದ ಗೌರಿಯನ್ನು ಕೊಲೆ ಮಾಡಲು ಒಟ್ಟು ನಾಲ್ಕು ತಂಡ ಬೆಂಗಳೂರಿನಲ್ಲಿ ಬೀಡುಬಿಟ್ಟಿತ್ತು.
ಗೌರಿ ಅವರನ್ನು ಹತ್ಯೆ ಮಾಡಿದರೆ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವವರ ಬಾಯಿ ಬಂದ್ ಮಾಡಬಹುದೆಂಬುದು ನಮ್ಮ ಮುಖ್ಯ ಉದ್ದೇಶವಾಗಿತ್ತು. ಹೀಗಾಗಿಯೇ ಒಂದು ವರ್ಷದಿಂದ ನಾವು ಕಾರ್ಯಾಚರಣೆ ನಡೆಸಿ ಅವರನ್ನು ಅಂದುಕೊಂಡಂತೆಯೇ ಕೊಲೆ ಮಾಡಿದ್ದೇವೆ ಎಂದು ಎಸ್ಐಟಿ ಮುಂದೆ ಪರಶುರಾಮ್ ವಾಘ್ಮೋರೆ ಹೇಳಿಕೆ ನೀಡಿದ್ದಾನೆ ಎಂದು ತಿಳಿದುಬಂದಿದೆ.
ಮಾಗಡಿ ರಸ್ತೆಯಲ್ಲಿ ಮನೆ:
ಶತಾಯಗತಾಯ ಗೌರಿಯನ್ನು ಮುಗಿಸಿದರೆ ಇನ್ನು ಮುಂದೆ ಹಿಂದೂ ಧರ್ಮದ ಬಗ್ಗೆ ಯಾರೋಬ್ಬರು ಮಾತನಾಡುವುದಾಗಲಿ ಇಲ್ಲವೇ ಅಂಕಣ ಬರೆಯುವುದು ನಿಂತು ಹೋಗುತ್ತದೆ ಎಂದು ಅಂದುಕೊಂಡಿದ್ದ ಇವರು ಗೌರಿಯನ್ನು ಕೊಲೆ ಮಾಡಲು ಮಾಗಡಿ ರಸ್ತೆಯಲ್ಲಿ ಒಂದು ಮನೆಯನ್ನು ಬಾಡಿಗೆ ಪಡೆದಿದ್ದರು.
ತಾವು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತೇವೆ ಎಂದು ಮನೆ ಮಾಲೀಕರಿಗೆ ಹೇಳಿದ್ದ ಪರಶುರಾಮ್ ವಾಘ್ಮೋರೆ, ಅಮೂಲ್ ಕಾಳೆ, ಪ್ರವೀಣ್ಕುಮಾರ್ ಮತ್ತು ಅಮಿತ್ ದೆಗ್ವೇಕರ್ ಅವರುಗಳು ಯಾರಿಗೂ ಅನುಮಾನ ಬಾರದಂತೆ ಎಚ್ಚರ ವಹಿಸಿದ್ದರು.
ಗೌರಿ ಲಂಕೇಶ್ ವಾಸವಾಗಿದ್ದ ರಾಜರಾಜೇಶ್ವರಿನಗರದ ನಿವಾಸದ ಬಳಿ ಒಬ್ಬ ವ್ಯಕ್ತಿ ಅವರ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದನು. ಯಾವ ಸಮಯಕ್ಕೆ ಗೌರಿ ಮನೆಗೆ ಬರುತ್ತಾರೆ, ಅವರು ಚಲಿಸುವ ವಾಹನ, ಹೋಗಿಬರುವ ರಸ್ತೆ ಮಾರ್ಗಗಳು, ವಾಹನದ ಸಂಖ್ಯೆ, ಕಚೇರಿಗೆ ಹೋಗುವ ಸಮಯ, ಬೆಳಗ್ಗೆ ಎಷ್ಟೋತ್ತಿಗೆ ಕಚೇರಿಗೆ ತೆರಳುತ್ತಾರೆ ಎಂಬುದು ಸೇರಿದಂತೆ ಇತ್ಯಾದಿ ಮಾಹಿತಿಯನ್ನು ಕಲೆ ಹಾಕುತ್ತಿದ್ದ.
ಎರಡನೇ ವ್ಯಕ್ತಿಯು ಬಸವನಗುಡಿಯಲ್ಲಿರುವ ಗೌರಿ ಕಚೇರಿ ಬಳಿ ತಿರುಗಾಡುತ್ತಿದ್ದ. ರಾಜರಾಜೇಶ್ವರಿನಗರದಿಂದ ಈ ಕಚೇರಿಗೆ ಯಾವ ಸಮಯಕ್ಕೆ ಬರುತ್ತಾರೆ, ಕಚೇರಿಯಲ್ಲಿ ಯಾರ್ಯಾರು ಇರುತ್ತಾರೆ, ಇಲ್ಲಿನ ಸಿಬ್ಬಂದಿಯ ಸಂಖ್ಯೆ, ಪತ್ರಿಕೆ ಎಲ್ಲಿ ಮುದ್ರಣವಾಗುತ್ತದೆ, ಕಚೇರಿಗೆ ಬಂದುಹೋಗುವವರ ಬಗ್ಗೆ ಮಾಹಿತಿಯನ್ನು ಪಡೆಯುತ್ತಿದ್ದ.
ಮತ್ತೋರ್ವ ವ್ಯಕ್ತಿ ಗೌರಿಯನ್ನು ಎಲ್ಲಿ ಹತ್ಯೆ ಮಾಡಬೇಕು, ಅವರ ನಿವಾಸದಲ್ಲೋ ಇಲ್ಲವೇ ಕಚೇರಿಯಲ್ಲೋ, ಹತ್ಯೆಗೆ ಯಾವ ಬಂದೂಕು ಬಳಸಬೇಕು ಎಂಬುದು ಸೇರಿದಂತೆ ಕೊಲೆಗೆ ಬೇಕಾದ ಸಿದ್ಧತೆಗಳನ್ನು ಮಾಡುತ್ತಿದ್ದ.
ನಾಲ್ಕನೇ ವ್ಯಕ್ತಿ ಮಾತ್ರ ಗೌಪ್ಯವಾಗಿ ಕಾರ್ಯಾಚರಣೆ ನಡೆಸುತ್ತಿದ್ದ. ಅಂದರೆ ಈ ಮೂವರಿಗೆ ಗೌರಿಯನ್ನು ಹತ್ಯೆ ಮಾಡಲು ಬೇಕಾದ ಎಲ್ಲ ಸಲಹೆ, ಮಾರ್ಗದರ್ಶನ ನೀಡುತ್ತಿದದ್ದು ಈತನೇ.
ಮೊಬೈಲ್ ಬಳಕೆ ಇಲ್ಲ:
ಅಂದಹಾಗೆ ಆರೋಪಿಗಳು ಗೌರಿಯನ್ನು ಹತ್ಯೆ ಮಾಡಿದ ಬಳಿಕ ನಾಳೆ ತಮ್ಮನ್ನು ಪೆÇಲೀಸರು ಬಂಧಿಸಿಬಹುದೆಂಬ ಭೀತಿ ಹಿನ್ನೆಲೆಯಲ್ಲಿ ಮೊಬೈಲ್ನಲ್ಲಿ ಮಾತನಾಡದೇ ಕೇವಲ ಕಾಯಿನ್ಬೂತ್ಗಳನ್ನು ಮಾತ್ರ ಬಳಕೆ ಮಾಡಿದ್ದಾರೆ.
ಅಪ್ಪಿತಪ್ಪಿಯೂ ಮೊಬೈಲ್ನಲ್ಲಿ ಗೌರಿ ಹತ್ಯೆ ಕುರಿತಂತೆ ಇವರು ಎಂದೂ ಮಾತನಾಡಿರಲಿಲ್ಲ. ಅನೇಕ ಬಾರಿ ಗೌರಿಯನ್ನು ಹತ್ಯೆ ಮಾಡಲು ಪ್ರಯತ್ನ ಮಾಡಲಾಗಿತ್ತಾದರೂ ಕೆಲವು ಕಾರಣಗಳಿಂದ ಸಾಧ್ಯವಾಗಿರಲಿಲ್ಲ.
ಮುಹೂರ್ತ ನಿಗದಿ:
ಗೌರಿಯನ್ನು ಕೊಲೆ ಮಾಡಲು ಇವರು ನಡೆಸಿದ ಪ್ರಯತ್ನ ಪದೇ ಪದೇ ವಿಫಲವಾದರೂ ತಾವಿಟ್ಟುಕೊಂಡಿರುವ ಗುರಿಯಿಂದ ಹಿಂದೆ ಸರಿಯಬಾರದೆಂಬ ದೃಢ ಸಂಕಲ್ಪಕ್ಕೆ ಬಂದರು. ಆವರೆಗೂ ಗೌರಿಯನ್ನು ಕೊಲೆ ಮಾಡುತ್ತೇನೆ ಎಂದು ಆತ್ಮವಿಶ್ವಾಸದಲ್ಲಿದ್ದ ಪರಶುರಾಮ್ ವಾಘ್ಮೋರೆ ತನ್ನ ಹುಟ್ಟೂರಿಗೆ ಹೋಗಿಬಂದು 15 ದಿನಗಳಲ್ಲಿ ಕೊಲೆ ಮಾಡುವ ಶಪಥ ಮಾಡಿದ್ದ ಎಂದು ತಿಳಿದುಬಂದಿದೆ.
ಅಂದರೆ 2017, ಸೆಪ್ಟೆಂಬರ್ 5ರಂದು ಸಂಜೆ ರಾಜರಾಜೇಶ್ವರಿನಗರದ ನಿವಾಸದ ಬಳಿಯೇ ಗೌರಿಯನ್ನು ಮುಗಿಸಿದರೆ ಯಾರಿಗೂ ಅನುಮಾನ ಬರುವುದಿಲ್ಲ ಎಂಬುದು ಆತನಿಗೆ ಖಚಿತವಾಗಿತ್ತು.
ಅಂದುಕೊಂಡಂತೆ ಸಂಜೆ 7.30ಕ್ಕೆ ಸರಿಯಾಗಿ ವಾಘ್ಮೋರೆ ಗೌರಿ ಹಣೆಗೆ ಗುಂಡಿಟ್ಟು ಅಲ್ಲಿಂದ ತನ್ನ ಹುಟ್ಟೂರಿಗೆ ಅಂದು ರಾತ್ರಿಯೇ ಪರಾರಿಯಾಗಿದ್ದ.
ಎಸ್ಐಟಿ ವಶದಲ್ಲಿರುವ ಈತ ವಿಚಾರಣೆ ಸಂದರ್ಭದಲ್ಲಿ ಗೌರಿ ಕೊಲೆಗೆ ನಡೆಸಿದ ಸಂಪೂರ್ಣ ಯೋಜನೆಯನ್ನು ಬಾಯ್ಬಿಟ್ಟಿದ್ದಾನೆ ಎಂದು ಗೊತ್ತಾಗಿದೆ.
ವಿಚಾರಣೆಗಾಗಿ ತೆಗೆದುಕೊಂಡಿದ್ದ ಆರೋಪಿಗಳು ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರುಗಳಿಂದ ಸಹ ಎಸ್ಐಟಿ ಕೆಲವು ಮಹತ್ವದ ಸಂಗತಿಗಳನ್ನು ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.