
ಬೆಂಗಳೂರು, ಜೂ.15- ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ದಾಬಸ್ಪೇಟೆಯ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಾಸಿಯಾ ಸೆಂಟರ್ ಆಫ್ ಎಕ್ಸಲೆನ್ಸ್ ಆ್ಯಂಡ ಇನೋವೇಷನ್ ಕಟ್ಟಡದ ಶಂಕುಸ್ಥಾಪನೆಯನ್ನು ಇದೇ 18ರಂದು ನಗರದ ಕಾಸಿಯಾ ಸಭಾಂಗಣದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೆರವೇರಿಸಲಿದ್ದಾರೆ ಎಂದು ಕಾಸಿಯಾ ಅಧ್ಯಕ್ಷ ಆರ್.ಹನುಮಂತೇಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 16.50ಕೋಟಿ ರೂ. ವೆಚ್ಚದಲ್ಲಿ 4.5 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು, ಇದೊಂದು ರಾಷ್ಟ್ರದ ಆರ್ಥಿಕತೆಯ ಅವಿಭಾಜ್ಯ ಅಂಗವಾಗಲಿದೆ ಎಂದು ಹೇಳಿದರು.
ಈ ಕಟ್ಟಡದಲ್ಲಿ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಹಾಗೂ ಮಾರುಕಟ್ಟೆ ಕೇಂದ್ರ, ಉದ್ಯಮಶೀಲ ಅಭಿವೃದ್ಧಿ ಕೇಂದ್ರ, ಸಂಶೋಧನೆ ಮತ್ತು ಕೌಶಲ್ಯಾಭಿವೃದ್ಧಿ ಕೇಂದ್ರ, ಟೂಲ್ ರೂಮ್ ಸೇರಿದಂತೆ ಇನ್ನಿತರೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ವೇಗವಾಗಿ ಬದಲಾಗುತ್ತಿರುವ ವ್ಯಾಪಾರ ಮತ್ತು ಆರ್ಥಿಕ ವಾತಾವರಣದ ಹಿನ್ನೆಲೆಯಲ್ಲಿ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ಅಭಿವೃದ್ಧಿಯ ಮೇಲೆ ಪ್ರಭಾವ ಬೀರುವ ವಿಭಿನ್ನ ವಿಷಯಗಳಿಗೆ ಆಧುನಿಕ ಹಾಗೂ ಮಾದರಿ ವಿಧಾನಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ವಸ್ತು ಪ್ರದರ್ಶನತಂಹ ಮೇಳಗಳನ್ನು ಆಯೋಜಿಸಿ ತಂತ್ರಜ್ಞಾನದ ನಿರ್ವಹಣೆ ಕುರಿತ ಪ್ರಚಾರವನ್ನು ಒಂದೇ ಛಾವಡಿಯಲ್ಲಿ ಮಾಡಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ವಿವರಿಸಿದರು.
ಸರ್ಕಾರದ ನೀತಿಗಳು, ಮಾರುಕಟ್ಟೆ ಸೇವೆಗಳು, ಅಂತಾರಾಷ್ಟ್ರೀಯ ಅವಕಾಶ, ತಂತ್ರಜ್ಞಾನ ವರ್ಗಾವಣೆ ಸೇರಿದಂತೆ ಇನ್ನಿತರೆ ಮೂಲಭೂತ ಸೌಕರ್ಯ ಮತ್ತು ಅಭಿವೃದ್ಧಿಗೆ ಬೆಂಬಲವಾದ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದೆ ಎಂದರು.
ಜೂ.18ರಂದು ನಡೆಯುವ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಸಣ್ಣ ಕೈಗಾರಿಕೆಗಳ ಸಚಿವ ಎಸ್.ಆರ್.ಶ್ರೀನಿವಾಸ್, ವಾಣಿಜ್ಯ ಮತ್ತು ಕೈಗಾರಿಕಾ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಅಪರ ಮುಖ್ಯಕಾರ್ಯದರ್ಶಿ ಬಿ.ವಿ.ಪ್ರಸಾದ್ ಮತ್ತಿತರರು ಪಾಲ್ಗೊಳ್ಳುವರು.