ಬೆಂಗಳೂರು, ಜೂ.15- ಕಾಂಗ್ರೆಸ್‍ನಲ್ಲಿ ಬಂಡಾಯ, ಭಿನ್ನಮತ ಇನ್ನೇನು ತಹಬದಿಗೆ ಬಂತು ಎನ್ನುವಷ್ಟರಲ್ಲೇ ಸಚಿವರಾದ ಜಯಮಾಲ ರಾಮಚಂದ್ರನ್ ಅವರನ್ನು ಮೇಲ್ಮನೆ ಸಭಾನಾಯಕಿಯನ್ನಾಗಿ ಮಾಡುತ್ತಿರುವ ಕ್ರಮಕ್ಕೆ ಪಕ್ಷದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಪಕ್ಷದ ಈ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಹಲವು ಹಿರಿಯ ಸದಸ್ಯರು ಸಹಿ ಸಂಗ್ರಹಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಮೇಲ್ಮನೆ ಸಭಾನಾಯಕ ಸ್ಥಾನವನ್ನು ನಿಭಾಯಿಸಲು ಸಮರ್ಥರ ಅಗತ್ಯವಿದೆ. ಜಯಮಾಲ ರಾಮಚಂದ್ರನ್ ಅವರಿಗೆ ಯಾವ ಅನುಭವವೂ ಇಲ್ಲ. ಮಹಿಳಾ ಕೋಟಾದಡಿ ಸಚಿವ ಸ್ಥಾನ ನೀಡಲಾಗಿದೆ. ಅದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ, ವಿಧಾನ ಪರಿಷತ್‍ನಲ್ಲಿ ಸಭಾನಾಯಕ ಸ್ಥಾನವನ್ನು ಅವರಿಗೆ ನೀಡುತ್ತಿರುವುದಕ್ಕೆ ನಮ್ಮ ತೀವ್ರ ಆಕ್ಷೇಪವಿದೆ ಎಂದು ಹಿರಿಯ ಸದಸ್ಯರಾದ ಎಚ್.ಎಂ.ರೇವಣ್ಣ, ಉಗ್ರಪ್ಪ, ಕೆ.ಸಿ.ಕೊಂಡಯ್ಯ, ಎಸ್.ಆರ್.ಪಾಟೀಲ್, ಅಬ್ದುಲ್ ಜಬ್ಬಾರ್ ಮುಂತಾದವರು ಹೈಕಮಾಂಡ್‍ಗೆ ದೂರು ನೀಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಮೇಲ್ಮನೆ ಸಭಾನಾಯಕ, ಪ್ರತಿಪಕ್ಷದ ನಾಯಕ ಅಂತಹ ಸ್ಥಾನವನ್ನು ನಿಭಾಯಿಸಲು ಅನುಭವದ ಅಗತ್ಯವಿದೆ. ಕನಿಷ್ಟ ಮೂರ್ನಾಲ್ಕು ಬಾರಿ ಸದನದ ಸದಸ್ಯರಾಗಿರಬೇಕು. ಸದನದ ನಡವಳಿಕೆಗಳನ್ನು ಅರಿತಿರಬೇಕು. ಪ್ರತಿಪಕ್ಷವನ್ನು ಸಮರ್ಥವಾಗಿ ಎದುರಿಸುವ ಛಾತಿ ಇರಬೇಕು. ಆದರೆ, ಜಯಮಾಲ ಅವರು ಪ್ರಥಮ ಬಾರಿ ಸದಸ್ಯರಾಗಿದ್ದಾರೆ. ಯಾವುದೇ ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಉದಾಹರಣೆಗಳಿಲ್ಲ.
ಕನಿಷ್ಟ ಪಕ್ಷದಲ್ಲೂ ಯಾವುದೇ ಹುದ್ದೆ ನಿರ್ವಹಿಸಿದ ಅನುಭವವೂ ಜಯಮಾಲ ಅವರಿಗಿಲ್ಲ. ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಯಾವುದೇ ಹುದ್ದೆಯನ್ನು ಇವರು ನಿರ್ವಹಿಸಿಲ್ಲ. ಕಲಾವಿದರ ಕ್ಷೇತ್ರದಿಂದ ವಿಧಾನ ಪರಿಷತ್‍ಗೆ ಆಯ್ಕೆಯಾದವರು. ನಾವೆಲ್ಲ ಚುನಾವಣೆಯಲ್ಲಿ ಗೆದ್ದುಬಂದಿದ್ದೇವೆ. ನಮ್ಮನ್ನೆಲ್ಲ ಕಡೆಗಣಿಸಿ ನಾಮನಿರ್ದೇಶನಗೊಂಡ ಜಯಮಾಲ ಅವರನ್ನು ಸಚಿವರನ್ನಾಗಿ ಮಾಡಿರುವುದಲ್ಲದೆ ಸಭಾನಾಯಕರನ್ನಾಗಿ ಮಾಡುತ್ತಿರುವುದು ಎಷ್ಟು ಸಮಂಜಸ ಎಂಬುದು ಸದನದ ಹಿರಿಯರ ಅಸಮಾಧಾನಕ್ಕೆ ಕಾರಣವಾಗಿದೆ.
ಪಕ್ಷದ ಈ ತೀರ್ಮಾನದಿಂದ ನಮಗೆಲ್ಲ ಬೇಸರವಾಗಿದೆ. ಸದನದಲ್ಲಿ ಸಾಕಷ್ಟು ಹಿರಿಯರಿದ್ದಾರೆ. ಐದಾರು ಬಾರಿ ಗೆಲುವು ಸಾಧಿಸಿದವರು ಇದ್ದಾರೆ. ಅಂತಹವರಲ್ಲಿ ಯಾರಾದರೊಬ್ಬರಿಗೆ ಸಚಿವ ಸ್ಥಾನ ನೀಡಿ ಅವರನ್ನು ಸಭಾನಾಯಕರನ್ನಾಗಿ ಪಕ್ಷ ಮಾಡಬಹುದಿತ್ತು. ಯಾವ ಕಾರಣಕ್ಕೆ ಇಂತಹ ತೀರ್ಮಾನ ತೆಗೆದುಕೊಂಡಿದೆ ಎಂಬುದು ಗೊತ್ತಾಗಿಲ್ಲ ಎಂದು ಒಳಗೊಳಗೇ ತಮ್ಮ ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ಉಮಾಶ್ರೀ ಅವರಾದರೂ ಚುನಾವಣೆಯಲ್ಲಿ ಗೆದ್ದು ಬಂದಿದ್ದರು. ಅವರನ್ನು ಸಚಿವರನ್ನಾಗಿ ಮಾಡಲಾಗಿತ್ತು. ಆದರೆ, ಜಯಮಾಲ ಅವರು ಯಾವುದೇ ಚುನಾವಣೆಯನ್ನು ಎದುರಿಸಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕರಾಗಿದ್ದರು ಅಷ್ಟೇ. ಚಲನಚಿತ್ರ ರಂಗದಲ್ಲಿ ಸಕ್ರಿಯವಾಗಿದ್ದರು. ಅದನ್ನು ಬಿಟ್ಟರೆ ರಾಜಕೀಯದಲ್ಲಿ ಅದರಲ್ಲೂ ಕಾಂಗ್ರೆಸ್‍ನಲ್ಲಿ ಸಕ್ರಿಯವಾಗಿದ್ದು ಅಷ್ಟಕ್ಕಷ್ಟೆ.
ಅವರ ಕಲಾಸೇವೆಯನ್ನು ಪರಿಗಣಿಸಿ ಪಕ್ಷ ಮೇಲ್ಮನೆ ಸದಸ್ಯರನ್ನಾಗಿ ಮಾಡಿ ಮಹಿಳಾ ಪ್ರಾತಿನಿಧ್ಯದಡಿ ಸಚಿವರನ್ನಾಗಿ ಮಾಡಿದೆ. ಅದಕ್ಕೆ ಯಾರೂ ತಕರಾರು ಮಾಡುತ್ತಿಲ್ಲ. ಆದರೆ, ಸಭಾನಾಯಕಿಯನ್ನಾಗಿ ಮಾಡುತ್ತಿರುವುದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇವರ ಕೈ ಕೆಳಗೆ ಕೆಲಸ ಮಾಡಲು ಹಿಂದೇಟು ಹಾಕುತ್ತಿರುವ ಹಲವರು ಇವರ ವಿರುದ್ಧ ಸಹಿ ಸಂಗ್ರಹಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಮೂಲಕ ಮೇಲ್ಮನೆಯ ಮತ್ತೊಬ್ಬರನ್ನು ಸಚಿವರನ್ನಾಗಿ ಮಾಡಬೇಕೆಂಬ ಒತ್ತಾಯವನ್ನು ಪಕ್ಷದ ಮುಂದಿಟ್ಟಿದ್ದಾರೆ.
ಜಯಮಾಲ ಅವರು ಸಚಿವರಾಗಿ ಘೋಷಣೆಯಾದ ಸಂದರ್ಭದಲ್ಲಿ ಪ್ರಬಲ ಆಕಾಂಕ್ಷಿಯಾಗಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತಿತರರು ಅಸಮಾಧಾನ ವ್ಯಕ್ತಪಡಿಸಿದ್ದರು. ಆಗ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಜಯಮಾಲ ಅವರು ಹೊಟ್ಟೆಕಿಚ್ಚಿಗೆ ಔಷಧಿ ಇಲ್ಲ ಎಂದು ಹೇಳಿದ್ದರು. ಈಗ ಅವರು ಸಭಾನಾಯಕಿಯಾಗುತ್ತಿರುವುದಕ್ಕೆ ಸದನದ, ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಮುಂದೇನಾಗುತ್ತದೆಯೋ ಎಂಬುದನ್ನು ಕಾದು ನೋಡಬೇಕು.