72ರ ಇಳಿಯ ವಯಸ್ಸಿನಲ್ಲಿಯೂ ಸ್ವಾಭಿಮಾನದ ಜೀವನ: ಮಹಿಳೆಯನ್ನು ‘ಸೂಪರ್ ವುಮೆನ್’ ಎಂದ ಕ್ರಿಕೆಟಿಗ ಸೆಹ್ವಾಗ್

ಮಧ್ಯಪ್ರದೇಶ: ಜಿಲ್ಲಾಧಿಕಾರಿಯ ಕಚೇರಿ ಮುಂದೆ ಟೈಪ್’ವ್ರೈಟರ್ ಆಗಿ ಟೈಪಿಂಗ್ ಮಾಡಿಕೊಂಡು ಜೀವನ ನಡೆಸುತ್ತಿರುವ 72 ವರ್ಷ ವೃದ್ಧಿಯೊಬ್ಬರ ವಿಡಿಯೋವನ್ನು ಕ್ರಿಕೆಟಿಗ ವೀರೇಂದ್ರ ಸಿಂಗ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಮಹಿಳೆಯನ್ನು ‘ಸೂಪರ್ ವುಮೆನ್’ ಎಂದು ಕೊಂಡಾಡಿದ್ದಾರೆ.
ಮಧ್ಯಪ್ರದೇಶದ ಸೆಹೋರ್’ನಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ವೃದ್ಧ ಮಹಿಳೆ ಟೈಪಿಂಗ್ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಇದರ ವಿಡಿಯೋವನ್ನು ವೀರೇಂದ್ರ ಸಿಂಗ್ ಅವರು ಟ್ವಿಟರ್ ನಲ್ಲಿ ಸೂಪರ್ ವುಮೆನ್ ಎಂಬ ಹೆಸರಿನಲ್ಲಿ ಹಂಚಿಕೊಂಡಿದ್ದಾರೆ.
ಲಕ್ಷ್ಮೀಬಾಯಿ ಎಂಬುವವರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಣ್ಣದೊಂದು ಬೆರಳಚ್ಚು ಯಂತ್ರವನ್ನು ಇಟ್ಟುಕೊಂಡು ದಾಖಲೆಗಳನ್ನು ಟೈಪ್ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.
ನನ್ನ ಮಗಳು ಅಪಘಾತಕ್ಕೀಡಾಗಿದ್ದಳು. ಇದಾದ ಬಳಿಕ ನಾನು ಬ್ಯಾಂಕ್ ನಿಂದ ಸಾಲವನ್ನು ಪಡೆದುಕೊಂಡಿದ್ದೆ. ಈ ಸಾಲವನ್ನು ತೀರಿಸಲು ಈ ಕೆಲಸವನ್ನು ಮಾಡುತ್ತಿದ್ದೇನೆ. ಸಾಲ ತೀರಿಸಲು ಭಿಕ್ಷೆ ಬೇಡಲು ನನಗಿಷ್ಟವಿಲ್ಲ. ಹೀಗಾಗಿ ಈ ಕೆಲಸವನ್ನು ಮಾಡುತ್ತಿದ್ದೇನೆ. ಆಗಿನ ಜಿಲ್ಲಾಧಿಕಾರಿಗಳಾದ ರಾಘವೇಂದ್ರ ಸಿಂಗ್ ಮತ್ತು ಎಸ್’ಡಿಎಂ ಭಾವನ ವಿಳಂಬೆ ಅವರ ಸಹಾಯದಿಂದ ಇಲ್ಲಿ ಕೆಲಸ ಮಾಡಲು ಸಾಧ್ಯವಾಯಿತು ಎಂದು ಲಕ್ಷ್ಮೀ ಬಾಯಿಯವರು ಹೇಳಿದ್ದಾರೆ.
ಮಹಿಳೆ ಕೆಲಸ ಮಾಡುತ್ತಿರುವ ವಿಡಿಯೋವನ್ನು ಸೆಹ್ವಾಗ್ ಅವರು ಜೂನ್.12 ರಂದು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ಮಹಿಳೆಯ ಕಾರ್ಯಕ್ಕೆ ಹಲವೆಡೆ ಮೆಚ್ಚುಗೆಗಳು ವ್ಯಕ್ತವಾಗತೊಡಗಿವೆ.
ಇವರು ನನಗೆ ಸೂಪರ್ ವುಮೆನ್. ಮಧ್ಯಪ್ರದೇಶದ ಸೆಹೋರ್ ಎಂಬಲ್ಲಿ ಮಹಿಳೆಯಿದ್ದು, ಭಾರತೀಯ ಯುವಕರು ಇವರಿಂದ ಕಲಿಯುವುದು ಬಹಳಷ್ಟಿದೆ. ಕೇವಲ ವೇಗವಷ್ಟೇ ಅಲ್ಲ, ಅವರಲ್ಲಿರುವ ಆತ್ಮಸ್ಥೈರ್ಯ ಮತ್ತು ಯಾವುದೂ ಚಿಕ್ಕ ಕೆಲಸವಲ್ಲ ಎಂಬ ಪಾಠವನ್ನು ಹೇಳಿಕೊಡುತ್ತದೆ. ಕಲಿಯಲು ಹಾಗೂ ಕೆಲಸ ಮಾಡಲು ವಯಸ್ಸು ಅಡ್ಡಿಯಾಗುವುದಿಲ್ಲ ಎಂದು ಹೇಳಿರುವ ವೀರೇಂದ್ರ ಸೆಹ್ವಾಗ್ ಅವರು, ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಇನ್ನು ತಮ್ಮ ವಿಡಿಯೋವನ್ನು ಕ್ರಿಕೆಟಿಗ ಹಂಚಿಕೊಂಡಿರುವ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಲಕ್ಷ್ಮೀ ಬಾಯಿಯವರು, ಸೆಹ್ವಾಗ್ ಅವರು ನನ್ನ ವಿಡಿಯೋವನ್ನು ಶೇರ್ ಮಾಡಿರುವುದಕ್ಕೆ ಬಹಳ ಸಂತಸವಿದೆ. ಸಾಲ ಹಿಂತಿರುಗಿಸಲು ಹಾಗೂ ಸ್ವಂತ ಮನೆ ಖರೀದಿಸಲು ನನಗೆ ಸಹಾಯಬೇಕು ಎಂದು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ