ಬೆಂಗಳೂರು, ಜೂ.14-ದೇಶದ ಐಕ್ಯತೆ, ಸ್ವಾತಂತ್ರ್ಯ ಹಾಗೂ ಹಕ್ಕುಗಳ ಉಳಿವಿಗಾಗಿ ಕಾರ್ಮಿಕರ ಪ್ರಜಾಸತಾತ್ಮಕ ಹಕ್ಕುಗಳಿಗಾಗಿ ಕನಿಷ್ಠ ವೇತನ, ಸಾಮಾಜಿಕ ಕಲ್ಯಾಣ ಯೋಜನೆಗಳ ಉಳಿವಿಗಾಗಿ ಆ.14ರ ರಾತ್ರಿ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಸಾಮೂಹಿಕ ಸತ್ಯಾಗ್ರಹ ಹಾಗೂ ಸೆಪ್ಟೆಂಬರ್ 5ರಂದು ಪಾರ್ಲಿಮೆಂಟ್ ಚಲೋ ನಡೆಸುವುದಾಗಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್‍ನ ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಮಿಕರ ರಕ್ಷಣೆಗಾಗಿ ಇದ್ದ 44 ಕಾರ್ಮಿಕ ಕಾನೂನುಗಳನ್ನು ನಾಲ್ಕು ಕಾರ್ಮಿಕ ಸಂಹಿತೆಗಳನ್ನಾಗಿ ಮಾರ್ಪಡಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ಸಾಮಾಜಿಕ ಭದ್ರತೆಗೆ ಸಂಬಂಧಿಸಿದಂತೆ 15 ಕಾರ್ಮಿಕ ಕಾನೂನುಗಳಾದ ಪ್ರಾವಿಡೆಂಟ್ ಫಂಡ್ ಆಕ್ಟ್ , ಇಎಸ್‍ಐ ಆಕ್ಟ್ ಹೆರಿಗೆ ಭತ್ಯೆ, ಕಾರ್ಮಿಕರ ಪರಿಹಾರ ಕಾಯ್ದೆ, ಅಸಂಘಟಿತ ಕ್ಷೇತ್ರದ ಸಾಮಾಜಿಕ ಭದ್ರತೆ ಕಾಯ್ದೆ, ಕಟ್ಟಡ ಕಾರ್ಮಿಕರ ಕಲ್ಯಾಣ ಸೆಸ್ ಕಾಯ್ದೆ, ಬೀಡಿ ಕಾರ್ಮಿಕರ ಕಲ್ಯಾಣ ಸೆಸ್ ಕಾಯ್ದೆಗಳನ್ನು ವಿಲೀನಗೊಳಿಸಿ ಸಾಮಾಜಿಕ ಭದ್ರತೆ ಕಾಯ್ದೆಯನ್ನು ತರಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ ಎಂದರು.
ಎಲ್ಲ ಕಾರ್ಮಿಕರಿಗೂ ಮಾಸಿಕ ಸಮಾನ ರೂ. 18 ಸಾವಿರ ಕನಿಷ್ಠ ವೇತನ, ಗುತ್ತಿಗೆ ಮತ್ತು ಸಾರ್ವಜನಿಕ ಉದ್ದಿಮೆಗಳ ರಕ್ಷಣೆ, ಕಾರ್ಮಿಕ ಕಾನೂನುಗಳ ಕಟ್ಟುನಿಟ್ಟಿನ ಜಾರಿ, ಬೆಲೆ ಏರಿಕೆಗೆ ನಿಯಂತ್ರಣ, ಸಾರ್ವಜನಿಕ ಪಡಿತರ ವ್ಯವಸ್ಥೆ ವಿಸ್ತರಣೆ, ನಿರುದ್ಯೋಗ ನಿವಾರಣೆ, ಉದ್ಯೋಗ ಸೃಷ್ಟಿ, ಶಿಕ್ಷಣದ ಹಕ್ಕು ಕಾಯ್ದೆ ಜಾರಿ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಪಾರ್ಲಿಮೆಂಟ್ ಚಲೋವನ್ನು ರೈತರು ಮತ್ತು ಕೃಷಿ ಕೂಲಿ ಕಾರ್ಮಿಕರ ಜೊತೆಗೂಡಿ ನಡೆಸಲಾಗುವುದು ಎಂದರು.