ಮುತ್ತತ್ತಿಯ ಕಾವೇರಿ ನದಿ ದಡದಲ್ಲಿ ಪ್ರವಾಸಿಗರ ಮೇಲೆ ಹೆಜ್ಜೇನು ದಾಳಿ

ಮಳವಳ್ಳಿ, ಜೂ.14- ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮುತ್ತತ್ತಿಯ ಕಾವೇರಿ ನದಿ ದಡದಲ್ಲಿ ಪ್ರವಾಸಿಗರ ಮೇಲೆ ಹೆಜ್ಜೇನು ದಾಳಿ ಮಾಡಿದ ಪರಿಣಾಮ ವ್ಯಕ್ತಿಯೋಬ್ಬ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಮೂಲತಃ ಮಳವಳ್ಳಿ ತಾಲ್ಲೂಕು ಕಿರುಗಾವಲು ಗ್ರಾಮದ ವಾಸಿ ವೆಂಕಟೇಶ್ ಅಲಿಯಾಸ್ ಜಯರಾಮ್ ( 42) ಎಂಬುವರೇ ಹೆಜ್ಜೇನು ದಾಳಿಯಿಂದ ಮೃತಪಟ್ಟಿದ್ದಾರೆ.
ಜಯರಾಮ್ ಬೆಂಗಳೂರಿನ ಜೆ.ಪಿ.ನಗರದಲ್ಲಿ ವಾಸವಾಗಿದ್ದು, ಈತ ಗಾರ್ಮೆಂಟ್ಸ್ ನಲ್ಲಿ ಮೆಕಾನಿಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರೆಂದು ತಿಳಿದು ಬಂದಿದೆ. ತನ್ನ ಸ್ನೇಹಿತರಾದ ನರೇಂದ್ರಬಾಬು, ಶಿವು, ವಸಂತ, ರಮೇಶ, ಅವರ ಜೊತೆ ಮುತ್ತತ್ತಿಗೆ ಪ್ರವಾಸಕ್ಕೆಂದು ಬಂದು ದೇವರ ದರ್ಶನ ಪಡೆದ ನಂತರ ಕಾವೇರಿ ನದಿ ದಡದಲ್ಲಿ ನಿಂತಿದ್ದ ಸಂದರ್ಭದಲ್ಲಿ ಹೆಜ್ಜೇನು ದಿಢೀರ್ ದಾಳಿ ಮಾಡಿವೆ.
ಹೆಜ್ಜೇನು ದಾಳಿಯಿಂದ ದಿಕ್ಕೆಟ್ಟ ಜನ ದಿಕ್ಕಾಪಾಲಾಗಿ ಓಡಿಹೋಗಿ ತಮ್ಮ ಪ್ರಾಣ ರಕ್ಷಿಸಿಕೊಂಡರಾದರೂ ಜಯರಾಮುವನ್ನು ಸುತ್ತುವರಿದ ಜೇನು ನೊಣಗಳು ತೀವ್ರ ದಾಳಿ ನಡೆಸಿದ ಪರಿಣಾಮ ಜ್ಞಾನ ತಪ್ಪಿ ಬಿದ್ದಿದ್ದಾರೆ.
ತಕ್ಷಣ ಸಾತನೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಈತನ ಪೆÇೀಷಕರು ಕಣ್ಣುಗಳನ್ನು ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಮಳವಳ್ಳಿ ಠಾಣೆ ಸಬ್ ಇನ್ಸ್‍ಪೆಕ್ಟರ್ ಶ್ರೀಧರ್ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ