
ಪಣಜಿ, ಜೂ.14-ವಿಶ್ವವಿಖ್ಯಾತ ಪ್ರವಾಸಿ ತಾಣ ಗೋವಾದಲ್ಲಿ ಅಂತಾರಾಷ್ಟ್ರೀಯ ಮಾದಕವಸ್ತು ಜಾಲವೊಂದನ್ನು ಭೇದಿಸಿರುವ ಆದಾಯ ಗುಪ್ತಚರ ನಿರ್ದೇಶನಾಲಯದ(ಡಿಆರ್‍ಐ) ಅಧಿಕಾರಿಗಳು ಭಾರೀ ಪ್ರಮಾಣದ ನಿಷೇಧಿತ ಪಾರ್ಟಿ ಡಗ್ಸ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಮೂವರು ವಿದೇಶಿಯರೂ ಸೇರಿದಂತೆ 10 ಜನರನ್ನು ಬಂಧಿಸಲಾಗಿದ್ದು, 30 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಮಾಲು ವಶಪಡಿಸಿಕೊಳ್ಳಲಾಗಿದೆ.
ಗೋವಾ, ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳಲ್ಲಿ ವ್ಯಾಪಿಸಿರುವ ಈ ವ್ಯವಸ್ಥಿತ ಜಾಲಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಮ್ಮಕ್ಕು ನೀಡಲಾಗಿದೆ ಎಂಬ ಸಂಗತಿ ಬಯಲಾಗಿದೆ.
ನಿಷೇಧಿತ ಪಾರ್ಟಿ ಡ್ರಗ್, ಕೆಟಮೈನ್ ಕಳ್ಳಸಾಗಣೆ ಮತ್ತು ಪೂರೈಕೆ ದಂಧೆಯಲ್ಲಿ ತೊಡಗಿದ್ದ ಇಬ್ಬರು ಬ್ರಿಟಿಷರು ಮತ್ತು ಒಬ್ಬ ವಿಯೆಟ್ನಾಂ ಪ್ರಜೆ ಸೇರಿದಂತೆ 10 ಜನರನ್ನು ಡಿಆರ್‍ಐ ಅಧಿಕಾರಿಗಳು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಈ ಜಾಲ ಮತ್ತಷ್ಟು ರಾಜ್ಯಗಳಿಗೂ ವ್ಯಾಪಿಸಿರುವ ಶಂಕೆ ಇದ್ದು, ತನಿಖೆ ಮತ್ತಷ್ಟು ಚುರುಕಾಗಿದೆ.
ಡ್ರಗ್ ಸಿಂಡಿಕೇಟ್ ಜಾಲದ ಸದಸ್ಯರು ಹವಾಲ ಮೂಲಕ ವಹಿವಾಟುಗಳನ್ನು ನಡೆಸುತ್ತಿದ್ದಾರೆ. ಭಾರತ ಮತ್ತು ವಿದೇಶಗಳಿಗೆ ಕೆಟಮೈನ್ ಮಾದಕ ವಸ್ತುಗಳನ್ನು ಪೂರೈಸುವ ವ್ಯವಸ್ಥಿತ ಜಾಲ ಇದೆಂದು ವಿಚಾರಣೆಯಿಂದ ತಿಳಿದು ಬಂದಿದೆ. ಈ ಸಂಪರ್ಕ ಜಾಲಗಳಿಗೆ ಈಗ ಕತ್ತರಿ ಹಾಕಲಾಗಿದೆ ಎಂದು ಡಿಆರ್‍ಐ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಧಿಕಾರಿಗಳು ಗೋವಾದ ಪಣಜಿ, ಮಹಾರಾಷ್ಟ್ರದ ರಾಯ್‍ಗಢ್ ಹಾಗೂ ಗುಜರಾತ್‍ನ ವಡೋದರ ನಗರಗಳ ಮೇಲೆ ಕಳೆದ ಮೂರು ದಿನಗಳಿಂದ ದಾಳಿ ನಡೆಸಿದ್ದು, 15 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ 308 ಕೆಜಿಎ ಕೆಟಮೈನ್ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
ಇದಲ್ಲದೇ, 250 ಕೆಜಿ ಮಾದಕ ವಸ್ತು ತಯಾರಿಸಲು ಸಾಧ್ಯವಾಗುವ 2000 ಕೆಜಿ ಕಚ್ಚಾ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದು 15 ಕೋಟಿ ರೂ.ಗಳಿಗೂ ಹೆಚ್ಚು ಬೆಲೆಬಾಳುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇಡೀ ಕಾರ್ಯಾಚರಣೆಗೆ ಆಪರೇಷನ್ ವಿಟಮಿನ್ ಎಂದು ಹೆಸರಿಟ್ಟು ಸೋಮವಾರದಿಂದ ಮೂರು ದಿನಗಳ ಕಾಲ ವಿವಿಧ ರಾಜ್ಯಗಳ 14 ಕೈಗಾರಿಕಾ ಪ್ರದೇಶಗಳು ಮತ್ತು ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ. ದಾಳಿ ವೇಳೆ ಪಣಜಿ, ರಾಯ್‍ಗಢ್ ಮತ್ತು ವಡೋದರದಲ್ಲಿನ ನಾಲ್ಕು ಅನಧಿಕೃತ ಕೆಟಮೈನ್ ತಯಾರಿಕಾ ಘಟಕಗಳನ್ನು ಬಂದ್ ಮಾಡಲಾಗಿದೆ. ಕುಖ್ಯಾತ ವಿದೇಶಿ ಕಳ್ಳಸಾಗಣೆದಾರರ ಈ ಜಾಲದ ಮಾಸ್ಟರ್‍ಮೈಂಡ್. ಈ ಹಿಂದೆ 2009 ಮತ್ತು 2012ರಲ್ಲಿ ಆತನನ್ನು ಬಂಧಿಸಲಾಗಿತ್ತು.