ನವದೆಹಲಿ, ಜೂ.14-ಪತ್ನಿಗೆ ಕಿರುಕುಳ ನೀಡುವ ಅಥವಾ ಆಕೆಯನ್ನು ತ್ಯಜಿಸುವ ಅನಿವಾಸಿ ಭಾರತೀಯರ (ಎನ್‍ಆರ್‍ಐಗಳ) ವಿರುದ್ಧ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಇಂಥ ಎನ್‍ಆರ್‍ಐಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗಿದೆ.
ಪತ್ನಿ ಪೀಡಕ ಎನ್‍ಆರ್‍ಐಗಳನ್ನು ಬಂಧಿಸುವ ಅಥವಾ ಅವರ ಪಾಸ್‍ಪೆÇೀರ್ಟ್‍ಗಳನ್ನು ರದ್ದುಗೊಳಿಸಲು ಈಗಾಗಲೇ ಕಾರ್ಯೋನ್ಮುಖವಾಗಿರುವ ಕೇಂದ್ರ ಸರ್ಕಾರ ಈಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದೆ.
ಇಂಥ ಎನ್‍ಆರ್‍ಐಗಳ ಆಸ್ತಿಗಳನ್ನು ಜಪ್ತಿ ಮಾಡಿ ಬಿಸಿ ಮುಟ್ಟಿಸಲು ಗಂಭೀರ ಚಿಂತನೆ ನಡೆಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ಸಂಬಂಧ ಈಗಾಗಲೇ ಉನ್ನತ ಮಟ್ಟದ ಸಮಿತಿಯ ಶಿಫಾರಸುಗಳನ್ನು ಸರ್ಕಾರ ಅಂಗೀಕರಿಸಿದ್ದು, ಹೊಸ ನಿಯಮಾವಳಿ ಜಾರಿಗೆ ಬರಲಿದೆ.
ಎನ್‍ಆರ್‍ಐ ಕುಟುಂಬಗಳಿಂದ ಪರಿತ್ಯಕ್ತ ಮತ್ತು ಕಿರುಕುಳಕ್ಕೆ ಒಳಗಾದ ಪತ್ನಿ ಮತ್ತು ಅವರ ತಂದೆ-ತಾಯಿಗಳಿಂದ ವಿದೇಶಾಂಗ ಸಚಿವಾಲಯಕ್ಕೆ ವ್ಯಾಪಕ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ.
ಕಳೆದ ಮೇ ತಿಂಗಳಿನಲ್ಲಿ ಹಲವು ಕಾನೂನು ಮತ್ತು ನಿಯಂತ್ರಣಾತ್ಮಕ ಸವಾಲುಗಳನ್ನು ನಿಭಾಯಿಸುವ ಸಂಬಂಧ ಶಿಫಾರಸುಗಳನ್ನು ಮಾಡಲು ಉನ್ನತ ಮಟ್ಟದ ಸಮಿತಿಯೊಂದನ್ನು ನೇಮಕ ಮಾಡಲಾಗಿತ್ತು.
ಇನ್ನು ಮುಂದೆ ಭಾರತದ ಯಾವುದೇ ದೇಶದೊಂದಿಗೆ ಗಡಿಪಾರು ಅಥವಾ ಹಸ್ತಾಂತರ ಒಪ್ಪಂದ ಮಾಡಿಕೊಳ್ಳುವ ವೇಳೆ ಗೃಹ ಹಿಂಸೆ ಕುರಿತ ವಿವರಗಳನ್ನು ಪ್ರಧಾನ ಅಂಶವಾಗಿ ಉಲ್ಲೇಖಿಸಬೇಕೆಂದು ಶಿಫಾರಸು ಮಾಡಲಾಗಿತ್ತು.
ಒಟ್ಟಾರೆ ಪತ್ನಿ ಪೀಡಕ ಹಾಗೂ ಭಾರತೀಯ ಯುವತಿಯನ್ನು ವಿವಾಹವಾಗಿ ಅವರಿಗೆ ವಂಚಿಸಿ ವಿದೇಶಕ್ಕೆ ಹಾರುವ ಎನ್‍ಆರ್‍ಐ ಪತಿಗಳಿಗೆ ಇನ್ನು ಮುಂದೆ ಭಾರತದಲ್ಲಿನ ಆಸ್ತಿ ಕಳೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.