ನವದೆಹಲಿ, ಜೂ.14-ರಾಜಧಾನಿ ದೆಹಲಿಯಲ್ಲಿ ಮೂರನೇ ದಿನವಾದ ಇಂದು ಕೂಡ ವಾಯು ಗುಣಮಟ್ಟ ತೀವ್ರ ಹದಗೆಟ್ಟ ಪರಿಸ್ಥಿತಿಯಲ್ಲೇ ಮುಂದುವರಿದಿದೆ. ಇನ್ನೂ 3-4 ದಿನ ಇದೇ ಸ್ಥಿತಿ ಮುಂದುವರಿಯಲಿದ್ದು, ದೀರ್ಘಕಾಲ ಹೊರಗಡೆ ಇರುವುದನ್ನು ಆದಷ್ಟೂ ಕಡಿಮೆ ಮಾಡುವಂತೆ ದೆಹಲಿ ನಿವಾಸಿಗಳಿಗೆ ಸಲಹೆ ಮಾಡಲಾಗಿದೆ.
ರಾಜಸ್ತಾನ ಸೇರಿದಂತೆ ಪಶ್ಚಿಮ ಭಾರತದ ವಿವಿಧ ರಾಜ್ಯಗಳ ಮೇಲೆ ಇತ್ತೀಚೆಗೆ ಅಪ್ಪಳಿಸಿದ ವಿನಾಶಕಾರಿ ಧೂಳು ಬಿರುಗಾಳಿ ಪರಿಣಾಮ ದೆಹಲಿಯಲ್ಲಿ ಮತ್ತೆ ವಾಯು ಮಾಲಿನ್ಯ ಗಂಭೀರ ಸ್ವರೂಪದಲ್ಲೇ ಮುಂದುವರಿದಿದೆ.
ಪಶ್ಚಿಮ ಭಾರತದ ಕೆಲವೆಡೆ ನೆಲಮಟ್ಟದಲ್ಲಿ ಧೂಳು ಬಿರುಗಾಳಿ ಅಪ್ಪಳಿಸಿದ್ದರಿಂದ ರಾಜಧಾನಿಯ ಗಾಳಿಯಲ್ಲಿ ದಪ್ಪ ಒರಟು ಮರಳು ಕಣಗಳು ಮಿಶ್ರಣಗೊಂಡು ತೀವ್ರ ಪ್ರಮಾಣಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ವಾಯು ಮಾಲಿನ್ಯಕ್ಕೆ ಕಾರಣವಾಗಿದೆ ಎಂದು ಕೇಂದ್ರ ಪರಿಸರ ನಿಯಂತ್ರಣ ಮಂಡಳಿ ದತ್ತಾಂಶ ಮಾಹಿತಿ ತೋರಿಸಿದೆ.
ಪಿಎಂ 10(10 ಎಂಎಂಗಿಂತ ಕಡಿಮೆ ವ್ಯಾಸವಿರುವ ಕಣಗಳು) ಮಟ್ಟವು ದೆಹಲಿ-ಎನ್ಆರ್ಸಿ ಪ್ರದೇಶದಲ್ಲಿ 778 ಹಾಗೂ ನಿರ್ದಿಷ್ಟವಾಗಿ ದೆಹಲಿಯಲ್ಲಿ 824ರಷ್ಟಿದ್ದು, ರಾಜಧಾನಿ ಮೇಲೆ ದಟ್ಟ ಹೊಗೆಯಂಥ ವಾತಾವರಣ ಕವಿದಿದೆ. ಇದರಿಂದ ವಾಹನ ಸವಾರರು ಸೇರಿದಂತೆ ನಾಗರಿಕರು ತೊಂದರೆ ಅನುಭವಿಸಿದರು.