ಬೆಂಗಳೂರು, ಜೂ.14-ಆರ್.ಆರ್.ನಗರ ಆಯ್ತು, ಜಯನಗರ ಆಯ್ತು. ಇನ್ನೇನಿದ್ದರೂ ಬಿನ್ನಿಪೇಟೆ ವಾರ್…!
ಬಿನ್ನಿಪೇಟೆ ವಾರ್ಡ್‍ನ ಬಿಬಿಎಂಪಿ ಕಾಂಗ್ರೆಸ್ ಸದಸ್ಯೆ ಮಹದೇವಮ್ಮ ನಾಗರಾಜ್ ತಿರುಪತಿ ಪ್ರವಾಸ ಸಂದರ್ಭದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು.
ಅವರ ಅಕಾಲಿಕ ಸಾವಿನ ಹಿನ್ನೆಲೆಯಲ್ಲಿ ಇದೇ 17ರಂದು ಬಿನ್ನಿಪೇಟೆ ವಾರ್ಡ್‍ಗೆ ಮರು ಚುನಾವಣೆ ನಡೆಯಲಿದ್ದು, 19ರಂದು ಫಲಿತಾಂಶ ಪ್ರಕಟವಾಗಲಿದೆ.
ಮೃತ ಮಹದೇವಮ್ಮ ಪುತ್ರಿ ಐಶ್ವರ್ಯ ಅವರು ಕಾಂಗ್ರೆಸ್‍ನಿಂದ ಅಭ್ಯರ್ಥಿಯಾಗುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಐಶ್ವರ್ಯ ಅವರಿಗೆ ಟಿಕೆಟ್ ನೀಡಲು ನಿರಾಕರಿಸಿ ಪಾಲಿಕೆ ಮಾಜಿ ಸದಸ್ಯೆ ವಿದ್ಯಾ ಅವರಿಗೆ ನೀಡಿದರು.
ಕಾಂಗ್ರೆಸ್‍ನ ಈ ಧೋರಣೆಯಿಂದ ಬೇಸತ್ತ ಮಹದೇವಮ್ಮ ಅವರ ಪತಿ ಬಿಟಿಎಸ್ ನಾಗರಾಜ್ ಅವರು ಪಕ್ಷ ತೊರೆದು ಜೆಡಿಎಸ್‍ಗೆ ಸೇರ್ಪಡೆಗೊಂಡಿದ್ದರು. ಇದೀಗ ಅವರ ಪುತ್ರಿ ಐಶ್ವರ್ಯ ಅವರು ಜೆಡಿಎಸ್‍ನಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಹಾಗಾಗಿ ಇಲ್ಲಿ ಮಿತ್ರ ಪಕ್ಷಗಳ ನಡುವೆ ಫೈಟ್ ಶುರುವಾಗಿದೆ.
ಜೆಡಿಎಸ್ -ಕಾಂಗ್ರೆಸ್ ನಡುವಿನ ಒಡಕನ್ನು ಲಾಭ ಮಾಡಿಕೊಳ್ಳಲು ಮುಂದಾಗಿರುವ ಬಿಜೆಪಿ ಚಾಮುಂಡೇಶ್ವರಿ ಎಂಬ ಸ್ಥಳೀಯ ಕಾರ್ಯಕರ್ತೆಗೆ ಟಿಕೆಟ್ ನೀಡಿದೆ.
ಇದೇ 17ರಂದು ನಡೆಯಲಿರುವ ಬಿನ್ನಿಪೇಟೆ ಉಪಸಮರದಲ್ಲಿ ವಿದ್ಯಾ, ಐಶ್ವರ್ಯ ಮತ್ತು ಚಾಮುಂಡೇಶ್ವರಿ ಅವರುಗಳ ನಡುವೆ ಬಿಗ್ ಫೈಟ್ ನಡೆಯಲಿದೆ. ಅದೃಷ್ಟ ಲಕ್ಷ್ಮಿ ಯಾರಿಗೆ ಒಲಿಯುವಳೋ ಕಾದು ನೋಡಬೇಕು.