
ಬೆಂಗಳೂರು, ಜೂ.14- ಪಕ್ಷ ಸದೃಢಗೊಳ್ಳಬೇಕಾದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಮರ್ಥ ವ್ಯಕ್ತಿಯ ಅಗತ್ಯವಿದೆ. ಸಿದ್ದರಾಮಯ್ಯರಂತಹ ಸೂಕ್ತ ವ್ಯಕ್ತಿಗೆ ಅವಕಾಶ ನೀಡಿದರೆ ಪಕ್ಷ ಇನ್ನಷ್ಟು ಬಲಗೊಳ್ಳಲಿದೆ ಎಂದು ಮಾಜಿ ಸಚಿವ ಎ.ಮಂಜು ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಕ್ಷದ ಹೈಕಮಾಂಡ್‍ನ ಪ್ರತಿನಿಧಿಯಾದ ವೇಣುಗೋಪಾಲ್ ನಗರದಲ್ಲಿದ್ದಾರೆ. ಅವರನ್ನು ಭೇಟಿ ಮಾಡಿ ಈ ಸಂಬಂಧ ಚರ್ಚೆ ನಡೆಸುತ್ತೇನೆ ಎಂದರು.
ದಿನೇಶ್ ಗುಂಡೂರಾವ್ ಸಹ ಸಮರ್ಥರೇ. ಅವರನ್ನು ವಿರೋಧಿಸುತ್ತಿಲ್ಲ. ಇಂದಿನ ಸ್ಥಿತಿಯಲ್ಲಿ ಪಕ್ಷ ಬಲಗೊಳ್ಳಬೇಕಾದರೆ ಇನ್ನಷ್ಟು ಸಮರ್ಥರು ಈ ಸ್ಥಾನ ವಹಿಸಿಕೊಳ್ಳಬೇಕು. ಸಿದ್ಧರಾಮಯ್ಯ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ಸಾಧ್ಯವಾಗದಿದ್ದರೆ ಡಿ.ಕೆ.ಶಿವಕುಮಾರ್, ಕೆ.ಎಚ್.ಮುನಿಯಪ್ಪ ಇಲ್ಲವೇ ಬಿ.ಕೆ.ಹರಿಪ್ರಸಾದ್ ಅಂತವರು ಈ ಸ್ಥಾನ ಅಲಂಕರಿಸಿದರೆ ಸಮಸ್ಯೆ ಇಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಸಾಕಷ್ಟು ಭಾಗ್ಯಗಳನ್ನು ನೀಡಿದ್ದಾರೆ. ಆದರೆ ಅದನ್ನು ಜನರಿಗೆ ತಿಳಿಸುವ ಕಾರ್ಯ ಆಗಿಲ್ಲ. ಅಂತಹ ಕೆಲಸ ನಡೆಯಬೇಕಿದೆ. ಒಬ್ಬ ಸೂಕ್ತ ವ್ಯಕ್ತಿ ಪಕ್ಷದ ಅಧಿಕಾರ ವಹಿಸಿಕೊಂಡರೆ ಇನ್ನಷ್ಟು ಬಲ ಬರಲಿದೆ. ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಇನ್ನಷ್ಟು ಹೆಚ್ಚಿನ ಸ್ಥಾನಗಳನ್ನು ಗಳಿಸಬೇಕಿದೆ. ಇದಕ್ಕೆ ಸಿದ್ದರಾಮಯ್ಯ ಒಬ್ಬ ಅರ್ಹ ವ್ಯಕ್ತಿ ಎಂದು ತಿಳಿಸಿದರು.