ನವದೆಹಲಿ: ಸಗಟು ಬೆಲೆಗಳ ಹಣದುಬ್ಬರ ಪ್ರಮಾಣ ಮೇ ತಿಂಗಳಿನಲ್ಲಿ ಕಳೆದ 14 ತಿಂಗಳ ಗರಿಷ್ಠ ಶೇ. 4.43ಕ್ಕೆ ಏರಿಕೆ ಆಗಿದೆ. ಪೆಟ್ರೋಲ್, ಡೀಸೆಲ್ ಹಾಗೂ ತರಕಾರಿಗಳ ಬೆಲೆ ಹೆಚ್ಚಳವು ಇದಕ್ಕೆ ಕಾರಣವೆನ್ನಲಾಗಿದೆ.
ಸಗಟು ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರ ದರ ಕಳೆದ ಏಪ್ರಿಲ್ ನಲ್ಲಿ ಶೇ. 3.18ರಷ್ಟಿತ್ತು ಇದೇ ವೇಳೆ 2017ರ ಮೇ ನಲ್ಲಿ ಶೇ. 2.26ರಷ್ಟು ದಾಖಲಾಗಿತ್ತು. ಇನ್ನು ಆಹಾರೋತ್ಪನ್ನಗಳ ಹಣದುಬ್ಬರ ಪ್ರಮಾಣ ಮೇ 2018 ರಲ್ಲಿ ಶೇ.1.60ರಷ್ಟು ದಾಖಲಾಗಿತ್ತು. ಏಪ್ರಿಲ್ ನಲ್ಲಿ ಇದು ಶೇ.0.87 ಆಗಿತ್ತು.
ಮೇ ನಲ್ಲಿ ತರಕಾರಿಗಳ ಹಣದುಬ್ಬರ ಪ್ರಮಾಣದಲ್ಲಿ ಸಹ ಏರಿಕೆಯಾಗಿದ್ದು ತರಕಾರಿಗಳ ಹಣದುಬ್ಬರ ಶೇ. 2.51ಕ್ಕೆ ತಲುಪಿತು. ಇಂಧನ ಹಾಗೂ ವಿದ್ಯುತ್ ಹಣದುಬ್ಬರ ಪ್ರಮಾಣ ಮೇ ನಲಿ ಶೇ .11.22ಕ್ಕೆ ಏರಿಕೆ ಕಂಡಿದ್ದರೆ ಆಲೂಗಡ್ಡೆ ಹಣದುಬ್ಬರ ಪ್ರಮಾಣ ಶೇಕಡ 81.93, ಹಣ್ಣುಗಳು ಶೇ 15.40, ದ್ವಿದಳ ಧಾನ್ಯಗಳು ಶೇ. 21.13ರಷ್ಟು ಹಣದುಬ್ಬರ ಪ್ರಮಾಣವನ್ನು ಕಂಡವು.
ಮೇ ಸಾಲಿನ ಸಗಟು ಬೆಲೆ ಹಣದುಬ್ಬರ ಕಳೆದ 14 ತಿಂಗಳಲ್ಲಿ ಗರಿಷ್ಠ ಪ್ರಮಾಣದ ಏರಿಕೆಯಾಗಿದೆ. 2017ರ ಮಾರ್ಚ್ ನಲ್ಲಿ ಸಗಟು ಹಣದುಬ್ಬರ ಪ್ರಮಾಣ ಶೇ 5.11ಕ್ಕೆ ತಲುಪಿತ್ತು.
ಹಣಕಾಸು ವರ್ಷದ ಎರಡನೆ ಅವಧಿಯಲ್ಲಿ ರಿಸರ್ವ್ ಬ್ಯಾಂಕ್ ತನ್ನ ಹಣಕಾಸು ನೀತಿಯನ್ನು ಮರು ನಿರೂಪಿಸಿಸ್ಸು ಬ್ಯಾಂಕ್ ರೆಪೋ ದರದಲ್ಲಿ ಶೇ. 0.25 ರಷ್ಟು ಏರಿಕೆ ಮಾಡಿತ್ತು.