ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ನಿವಾಸದಿಂದ ಲೆಫ್ಟಿನೆಂಟ್ ಗವರ್ನರ್ ನಿವಾಸದವರೆಗೆ ಆಮ್ ಆದ್ಮಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ವಿರುದ್ಧ ಹೇಳಿಕೆಗಳನ್ನು ಹೊಂದಿದ್ದ ಪೋಸ್ಟರ್ ಇತ್ತು ಎನ್ನುವುದು ವಿವಾದ ಸೃಷ್ಟಿಸಿದೆ.
ಆಪ್ ಶಾಸಕಿ ಅಲ್ಕಾ ಲಾಂಬಾ ಅಥವಾ ಇನ್ಯಾರೋ ಗುಂಪಿನಲ್ಲಿ ವಾಜಪೇಯಿ ವಿರೋಧಿ ಬರಹವಿದ್ದ ಪೋಸ್ಟರ್ ಹಿಡಿದುಕೊಂಡಿದ್ದರು ಎನ್ನವುದು ವಿವಾದ ಸೃಷ್ಟಿಯಾಗುತ್ತಲೇ ಪೋಸ್ಟರ್ ಅನ್ನು ಮರೆಮಾಚಲಾಗಿದೆ. ಆದರೆ ಅಲ್ಕಾ ಲಾಂಬಾ ಅದನ್ನು ನಿರಾಕರಿಸಿದ್ದಾರೆ.
ಆಪ್ ಪೋಸ್ಟರ್ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಆಪ್ ರಾಜ್ಯಸಭಾ ಸಂಸದ ಸಂಜಯ್ ಸಿಂಗ್, ಆಪ್ ಕಾರ್ಯಕರ್ತರು ಅಂತಹ ಕೆಲಸ ಮಾಡಿಲ್ಲ, ಅದೇನಿದ್ದರೂ ಬಿಜೆಪಿ ಕಾರ್ಯಕರ್ತರು ಮಾಡಿರಬಹುದು ಎಂದಿದ್ದಾರೆ.
ವಿವಾದ ಸೃಷ್ಟಿಸುವುದು ಮತ್ತು ಆಪ್ ಪ್ರತಿಭಟನಾ ಸಭೆಯನ್ನು ತಡೆಯುವುದು ಬಿಜೆಪಿ ಉದ್ದೇಶವಾಗಿದೆ, ಹೀಗಾಗಿ ಅವರೇ ಅಂತಹ ಪೋಸ್ಟರ್ ಸೃಷ್ಟಿಸಿ ಅದನ್ನು ಹಿಡಿದುಕೊಂಡಿರಬಹುದು. ಆಪ್ ಅಂತಹ ಪೋಸ್ಟರ್ ತಯಾರಿಸಿಲ್ಲ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.
ಆಪ್ ಪೋಸ್ಟರ್ನಲ್ಲಿ ವಾಜಪೇಯಿಯವರನ್ನು ನಿಂದಿಸಿರುವ ಕುರಿತು ಮಾತನಾಡಿದ ದಿಲ್ಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ, ವಾಜಪೇಯಿಯಂತಹ ವ್ಯಕ್ತಿಗೆ ಹೇಗೆ ಗೌರವ ಕೊಡಬೇಕೆಂದು ಆಪ್ಗೆ ತಿಳಿದಿಲ್ಲ, ಆಪ್ ಮಾತ್ರ ಅಂತಹ ಕೆಲಸ ಮಾಡುತ್ತದೆ ಎಂದಿದ್ದಾರೆ.