ಬೆಂಗಳೂರು:ಜೂ-೧೪: ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ರೌಡಿಗಳು ಅಟ್ಟಹಾಸ ಮೆರೆದಿದ್ದಾರೆ. ದೊಣ್ಣೆಯಿಂದ ಹೊಡೆದು ವ್ಯಕ್ತಿಯೋರ್ವನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.
ರಾತ್ರಿ ಕೆಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ. ಮತೀನ್ (32) ಕೊಲೆಯಾದ ವ್ಯಕ್ತಿ. ಗೋವಿಂದಪುರದ ಬಿಬಿಎಂಪಿ ಮೈದಾನದಲ್ಲಿ ಈ ಘಟನೆ ನಡೆದಿದೆ. ಕೂಲಿ ಕಲಸ ಮಾಡಿಕೊಂಡಿದ್ದ ಮತೀನ್ ನಿನ್ನೆ ರಾತ್ರಿ 10 ಗಂಟೆ ವೇಳೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬಾಲಿಸಿದ ದುಷ್ಕರ್ಮಿಗಳ ಗುಂಪು ಅಟ್ಟಾಡಿಸಿಕೊಂಡು ಹಲ್ಲೆ ಮಾಡಿದೆ.
ತಪ್ಪಿಸಿಕೊಳ್ಳಲೆಂದು ಮತೀನ್ ಬಿಬಿಎಂಪಿ ಮೈದಾನಕ್ಕೆ ಓಡಿ ಹೋದಾಗ ಅಲ್ಲಿ ಅಟ್ಟಾಡಿಸಿ ದೊಣ್ಣೆಯಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಕತ್ತಲಾಗಿದ್ದರಿಂದ ಮೈದಾನದಲ್ಲಿ ಯಾರೂ ಇರಲಿಲ್ಲ. ಭೀಕರವಾಗಿ ಹಲ್ಲೆ ನಡೆಸಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಹಳೆಯ ದ್ವೇಷದಿಂದ ಈ ಕೊಲೆ ನಡೆದಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.