ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಳೀಯ ಯುವಕರು ಉಗ್ರ ಸಂಘಟನೆ ಪಾಲಾಗುವುದನ್ನು ತಡೆಯಲು ಭಾರತೀಯ ಸೇನೆ ಹಮ್ಮಿಕೊಂಡಿದ್ದ ಅಭಿಯಾನಕ್ಕೆ ಅಭೂತಪೂರ್ವ ಯಶಸ್ಸು ದೊರೆತಿದ್ದು, ಸೈನಿಕರಿಂದ ತರಬೇತಿ ಪಡೆದಿದ್ದ 8 ಮಂದಿ ಯುವಕರು ಇದೀಗ ಭಾರತೀಯ ಸೇನೆಗೆ ಆಯ್ಕೆಯಾಗಿದ್ದಾರೆ.
ಹೌದು.. ಈ ಹಿಂದೆ ಭಾರತೀಯ ಸೇನೆ ತರಬೇತಿ ನೀಡಿದ್ದ 16 ಮಂದಿ ಯುವಕರ ಪೈಕಿ 8 ಮಂದಿ ಯುವಕರು ಭಾರತೀಯ ಸೇನೆಗೆ ಆಯ್ಕೆಯಾಗಿದ್ದಾರೆ. ಈ ಹಿಂದೆ ಉದಮ್ ಪುರದಲ್ಲಿ ನಡೆದಿದ್ದ ಪರೀಕ್ಷೆಯಲ್ಲಿ ಈ 8 ಮಂದಿ ಉತ್ತೀರ್ಣರಾಗಿದ್ದು, ಕಾಶ್ಮೀರದ ಜುಲ್ಲಾಸ್ ಸೆಕ್ಟರ್ ನಲ್ಲಿ ಸೇನೆಗೆ ಆಯ್ಕೆಯಾದ ಯುವಕರನ್ನು ಗೌರವಿಸಲಾಯಿತು. ಅಲ್ಲದೆ ದೇಶ ಸೇವೆಗೆ ಆಗಮಿಸುವಂತೆ ವಿದ್ಯುಕ್ತವಾಗಿ ಸ್ವಾಗತ ಕೊರಲಾಯಿತು.
ಇನ್ನು ಕಾಶ್ಮೀರದಲ್ಲಿ ಯುವಕರನ್ನು ಉಗ್ರ ಸಂಘಟನೆಗಳತ್ತ ಆಕರ್ಷಿಸುವ ಅಕ್ರಮ ಚಟುವಟಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಇದೀಗ ಈ ಚಟುವಟಿಕೆಗೆ ಸಡ್ಡು ಹೊಡೆದಿರುವ ಸೇನೆ ಕಾಶ್ಮೀರಿ ಯುವಕರಿಗೆ ತರಬೇತಿ ನೀಡಿ ಅವರನ್ನು ಸೇನೆಗೆ ಸೇರಿಸಲು ಮುಂದಾಗಿದೆ.