ಇಂದಿನಿಂದ ರಷ್ಯಾದಲ್ಲಿ ಫಿಫಾ ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿ: ಒಂದು ತಿಂಗಳ ಕಾಲ ಕ್ರೀಡಾಪ್ರಿಯರಂನ್ನು ರಂಜಿಸಲಿದೆ ಕಾಲ್ಚೆಂಡಿನ ಕೌತಕ

ಮಾಸ್ಕೊ :ಜೂ-14; ಕ್ರೀಡಾ ಜಗತ್ತಿನ ಬಹು ದೊಡ್ಡ ಫಿಫಾ ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿಯ 21ನೇ ಆವೃತ್ತಿ ಇಂದಿನಿಂದ ಆರಂಭವಾಗಲಿದ್ದು, ಕಾಲ್ಚೆಂಡಿನ ರೋಚಕ ಕಾಳಗಕ್ಕೆ ರಷ್ಯಾದ ಮಾಸ್ಕೋ ನಗರ ಸಂಪೂರ್ಣ ಸಜ್ಜುಗೊಂಡಿದ್ದು, ಇಂದಿನಿಂದ ಬರೊಬ್ಬರಿ ಒಂದು ತಿಂಗಳ ಕಾಲ ಫುಟ್ಬಾಲ್ ಪ್ರಿಯರಿಗೆ ಮಹಾಸಂಭ್ರಮ.

ಇದೇ ಮೊದಲ ಬಾರಿಗೆ ಇಲ್ಲಿ ಈ ಟೂರ್ನಿ ನಡೆಯಲಿದೆ. ಹಲವು ದೇಶ, ಭಾಷೆ, ಧರ್ಮ, ವರ್ಣಗಳ ಸಮ್ಮಿಲನದ ವೇದಿಕೆಯಾಗಿ ಈ ಟೂರ್ನಿ ಗಮನ ಸೆಳೆಯಲು ಸಿದ್ಧವಾಗಿದೆ. ಒಂದು ಕಾಲದಲ್ಲಿ ಅಮೆರಿಕದ ಕ್ರೀಡಾಶಕ್ತಿಗೆ ಸೆಡ್ಡು ಹೊಡೆದು ಮೆರೆದಿದ್ದ ರಷ್ಯಾ ಇತ್ತೀಚಿನ ದಿನಗಳಲ್ಲಿ ಕಳೆಗುಂದಿತ್ತು. ಗತವೈಭವವನ್ನು ಮರಳಿ ಪಡೆಯುವ ಪ್ರಯತ್ನಕ್ಕೆ ಫಿಫಾ ವಿಶ್ವಕಪ್ ಟೂರ್ನಿ ಒಂದು ಅವಕಾಶವಾಗಿದೆ. ಕ್ರೀಡಾಪ್ರಿಯರೂ ಆಗಿರುವ ಇಲ್ಲಿಯ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಯೋಜನೆಯೂ ಇದೇ ಆಗಿದೆ.

32 ತಂಡಗಳ ಹಣಾಹಣಿ: 32 ದೇಶಗಳ ತಂಡಗಳು ತಮ್ಮ ಪರಾಕ್ರಮವನ್ನು ಇಲ್ಲಿ ಒರೆಗೆ ಹಚ್ಚಲಿವೆ. ಹೋದ ಬಾರಿಯ ಚಾಂಪಿಯನ್ ಜರ್ಮನಿ ಪ್ರಶಸ್ತಿಯನ್ನು ತನ್ನ ಬಳಿಯೇ ಉಳಿಸಿಕೊಳ್ಳಲು ಹೋರಾಟಕ್ಕಿಳಿಯಲಿದೆ. ಆತಿಥೇಯ ತಂಡ ರಷ್ಯಾ ಕೂಡ ಹೆಜ್ಜೆಗುರುತು ಮೂಡಿಸಲು ಹಾತೋರೆಯುತ್ತಿದೆ. ಒಟ್ಟು ಏಳು ಬಾರಿ ಫೈನಲ್ ಪ್ರವೇಶಿಸಿದ ಮತ್ತು ಐದು ಬಾರಿಯ ಚಾಂಪಿಯನ್‌ ಬ್ರೆಜಿಲ್‌, ಎಂಟು ಬಾರಿ ಫೈನಲ್‌ನಲ್ಲಿ ಆಡಿ ನಾಲ್ಕು ಸಲ ಪ್ರಶಸ್ತಿಗೆ ಮುತ್ತಿಕ್ಕಿದ ಜರ್ಮನಿ, ತಲಾ ಎರಡು ಬಾರಿ ಚಾಂಪಿಯನ್ ಆದ ಅರ್ಜೆಂಟೀನಾ ಮತ್ತು ಉರುಗ್ವೆ ತಂಡಗಳ ಜೊತೆ ಒಂದೊಂದು ಬಾರಿ ಚಾಂಪಿಯನ್‌ ಪಟ್ಟ ಅಲಂಕರಿಸಿದ ಫ್ರಾನ್ಸ್, ಇಂಗ್ಲೆಂಡ್ ಮತ್ತು ಸ್ಪೇನ್ ತಂಡಗಳು ಈ ಬಾರಿಯೂ ಪ್ರಶಸ್ತಿ ಮೇಲೆ ಕಣ್ಣಿಟ್ಟು ಕಣಕ್ಕೆ ಇಳಿಯಲಿವೆ. ನಾಲ್ಕು ಪ್ರಶಸ್ತಿ ಗೆದ್ದು ಎರಡು ಬಾರಿ ರನ್ನರ್ ಅಪ್‌ ಆಗಿದ್ದ ಇಟಲಿ ಈ ಬಾರಿ ಟೂರ್ನಿಯಲ್ಲಿ ಆಡಲು ಅರ್ಹತೆ ಗಳಿಸಿಲ್ಲ.

ಸಂಜೆ ಅದ್ದೂರಿ ಉದ್ಘಾಟನಾ ಸಮಾರಂಭದ ನಂತರ ಆತಿಥೇಯ ರಾಷ್ಟ್ರದ ತಂಡ ಒಳಗೊಂಡ ಉದ್ಘಾಟನಾ ಪಂದ್ಯದೊಂದಿಗೆ ಟೂರ್ನಿಗೆ ಚಾಲನೆ ಸಿಗಲಿದೆ. ಎರಡನೇ ದಿನ ಮೂರು ಮತ್ತು ಮೂರನೇ ದಿನ ನಾಲ್ಕು ಪಂದ್ಯಗಳು ಇವೆ. ಭಾನುವಾರದ ನಂತರ ಪ್ರತಿ ದಿನ ಮೂರು ಪಂದ್ಯಗಳು ಕ್ರೀಡಾಪ್ರಿಯರಿಗೆ ಮುದ ನೀಡಲಿವೆ.

ಜೂನ್‌ 28ರ ವರೆಗೆ ಗುಂಪು ಹಂತದ ಪಂದ್ಯಗಳು ನಡೆಯಲಿದ್ದು ಜೂನ್‌ 30ರಿಂದ ಜುಲೈ ಮೂರರ ವರೆಗೆ ನಾಕೌಟ್‌ ಪಂದ್ಯಗಳು, ಆರು ಮತ್ತು ಏಳರಂದು ಕ್ವಾರ್ಟರ್ ಫೈನಲ್‌, 10 ಮತ್ತು 11ರಂದು ಸೆಮಿಫೈನಲ್‌ ಹಾಗೂ 15ರಂದು ಪ್ರಶಸ್ತಿ ಸುತ್ತಿನ ಹಣಾಹಣಿ ನಡೆಯಲಿದೆ.

ಫಿಫಾ ವಿಶ್ವಕಪ್‌ ಟ್ರೋಫಿಯ ವಿಶೇಷತೆಗಳು:

1974ರ ವಿಶ್ವಕಪ್‌ ಗೆದ್ದ ತಂಡಕ್ಕೆ ಮೊದಲ ಬಾರಿಗೆ ಈ ಟ್ರೋಫಿಯನ್ನು ನೀಡಲಾಯಿತು. ಇಟಲಿಯ ಕಲಾವಿದ ಸಿಲ್ವಿಯೊ ಗಜ್ಜಾನಿಗಾ ಅವರು ಈ ಟ್ರೋಫಿಯನ್ನು ವಿನ್ಯಾಸ ಮಾಡಿದ್ದಾರೆ. ಇಟಲಿಯ ಜಿಡಿಇ ಬರ್ಟೊನಿ ಕಂಪನಿಯು 18 ಕ್ಯಾರಟ್‌ ಚಿನ್ನದಿಂದ ಇದನ್ನು ತಯಾರಿಸಿದೆ. ಇಬ್ಬರು ಭೂಮಿಯನ್ನು ಎತ್ತಿಹಿಡಿದಿರುವಂತೆ ಈ ಟ್ರೋಫಿಯ ವಿನ್ಯಾಸವಿದೆ. ವಿಶ್ವಕಪ್‌ ಗೆದ್ದ ರಾಷ್ಟ್ರಗಳ ಹೆಸರನ್ನು ಈ ಟ್ರೋಫಿಯ ಕೆಳಗೆ ನಮೂದಿಸಲಾಗುತ್ತದೆ.

ಎತ್ತರ: 36.5 ಸೆಂ.

ತೂಕ: 6.175 ಕೆ.ಜಿ.

ಮೌಲ್ಯ: 1.7 ಕೋಟಿ ರೂ (ಈಗಿನ ಡಾಲರ್‌ ಮೌಲ್ಯಕ್ಕೆ ಅನುಗುಣವಾಗಿ ರೂಪಾಯಿಗೆ ಪರಿವರ್ತಿಸಲಾಗಿದೆ)

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ