
ನವದೆಹಲಿ, ಜೂ.13-ತೀವ್ರ ಪರಿಸರ ಮಾಲಿನ್ಯದಿಂದ ಕಂಗೆಟ್ಟಿದ್ದ ರಾಜಧಾನಿ ದೆಹಲಿಯಲ್ಲಿ ಮತ್ತೆ ವಾಯು ಗುಣಮಟ್ಟ ತೀವ್ರ ಹದಗೆಟ್ಟಿದೆ. ಪಶ್ಚಿಮ ಭಾರತದ ವಿವಿಧ ರಾಜ್ಯಗಳ ಮೇಲೆ ಇತ್ತೀಚೆಗೆ ಬಂದೆರಗಿದ ವಿನಾಶಕಾರಿ ಧೂಳು ಬಿರುಗಾಳಿ ಪರಿಣಾಮ ದೆಹಲಿಯಲ್ಲಿ ಮತ್ತೆ ವಾಯುಮಾಲಿನ್ಯ ಗಂಭೀರ ಸ್ವರೂಪದಲ್ಲಿದೆ.
ಪಶ್ಚಿಮ ಭಾರತದ ಕೆಲವೆಡೆ ನೆಲಮಟ್ಟದಲ್ಲಿ ಧೂಳು ಬಿರುಗಾಳಿ ಅಪ್ಪಳಿಸಿದ್ದರಿಂದ ರಾಜಧಾನಿಯ ಗಾಳಿಯಲ್ಲಿ ದಪ್ಪ ಒರಟು ಮರಳು ಕಣಗಳು ಮಿಶ್ರಣಗೊಂಡು ತೀವ್ರ ಪ್ರಮಾಣಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ವಾಯು ಮಾಲಿನ್ಯಕ್ಕೆ ಕಾರಣವಾಗಿದೆ ಎಂದು ಕೇಂದ್ರ ಪರಿಸರ ನಿಯಂತ್ರಣ ಮಂಡಳಿ ದತ್ತಾಂಶ ಮಾಹಿತಿ ತೋರಿಸಿದೆ.
ಪಿಎಂ 10 (10 ಎಂಎಂಗಿಂತ ಕಡಿಮೆ ವ್ಯಾಸವಿರುವ ಕಣಗಳು) ಮಟ್ಟವು ದೆಹಲಿ-ಎನ್‍ಆರ್‍ಸಿ ಪ್ರದೇಶದಲ್ಲಿ 778 ಹಾಗೂ ನಿರ್ಧಿಷ್ಟವಾಗಿ ದೆಹಲಿಯಲ್ಲಿ 824ರಷ್ಟಿದ್ದು, ರಾಜಧಾನಿ ಮೇಲೆ ಮಂಜು(ದಟ್ಟ ಹೊಗೆಯಂಥ ವಾತಾವರಣ) ಕವಿದಿದ್ದು, ಮಂಜಿನಂಥ ತೆರೆ ಆವರಿಸಿದೆ. ಇದರಿಂದ ವಾಹನ ಸವಾರರು ತೊಂದರೆ ಅನುಭವಿಸಿದರು. ದೆಹಲಿ-ಎನ್‍ಸಿಆರ್ ಪ್ರದೇಶದಲ್ಲಿ ವಾಯು ಗುಣಮಟ್ಟ ತೀವ್ರ ಹದಗೆಟ್ಟಿದೆ ಎಂದು ವಾಯು ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನಾ ಸಂಸ್ಥೆಯ ವಿಜ್ಞಾನಿ ಗುಫ್ರಾನ್ ಬೇಗ್ ಹೇಳಿದ್ದಾರೆ.