ಮೈನ್ಪುರಿ, ಜೂ.13-ಖಾಸಗಿ ಬಸ್ಸೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಉರುಳಿದ ಪರಿಣಾಮ 17 ಮಂದಿ ಮೃತಪಟ್ಟು, ಇತರ 35 ಜನರು ತೀವ್ರ ಗಾಯಗೊಂಡ ಘಟನೆ ಉತ್ತರಪ್ರದೇಶದ ಮೈನ್ಪುರಿಯಲ್ಲಿ ಇಂದು ಮುಂಜಾನೆ ಸಂಭವಿಸಿದೆ.
ಈ ಭೀಕರ ದುರಂತದಲ್ಲಿ ಗಾಯಗೊಂಡಿರುವವರಲ್ಲಿ ಕೆಲವರ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.
ಸುಮಾರು 60-70 ಜನರಿದ್ದ ಈ ಬಸ್ ಉತ್ತರಪ್ರದೇಶದ ಫರೂಕಾಬಾದ್ನಿಂದ ರಾಜಸ್ತಾನದ ಜೈಪುರ್ಗೆ ತೆರಳುತ್ತಿತ್ತು. ಇಂದು ಮುಂಜಾನೆ 5.30ರಲ್ಲಿ ಮೈನ್ಪುರಿ-ಎಟಾವಾ ರಸ್ತೆಯಲ್ಲಿ ಮೈನ್ಪುರಿ ಜಿಲ್ಲಾ ಕೇಂದ್ರದಿಂದ 25 ಕಿ.ಮೀ.ದೂರದ ತೀರಥ್ಪುರ್ ಗ್ರಾಮದ ಬಳಿ ರೋಡ್ ಡಿವೈಡರ್ಗೆ ಡಿಕ್ಕಿ ಹೊಡೆದು ಉರುಳಿ ಬಿತ್ತು ಎಂದು ಮೈನ್ಪುರಿ ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿ ಓಂ ಪ್ರಕಾಶ್ ಸಿಂಗ್ ತಿಳಿಸಿದ್ದಾರೆ.
ಈ ದುರ್ಘಟನೆಯಲ್ಲಿ ಮಹಿಳೆಯೊಬ್ಬರು ಸೇರಿದಂತೆ 17 ಪ್ರಯಾಣಿಕರು ಮೃತಪಟ್ಟು, 35ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮೈನ್ಪುರಿ ಮತ್ತು ಸಾಯಿಫಾಯಿ ಪ್ರದೇಶಗಳ ಆಸ್ಪತ್ರೆಗಳಿಗೆ ಸೇರಿಸಲಾಗಿದೆ. ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಅವರು ಹೇಳಿದ್ದಾರೆ
ಈ ಬಸ್ಸಿನಲ್ಲಿದ್ದವರು ಬಹುತೇಕ ಕೂಲಿ ಕಾರ್ಮಿಕರಾಗಿದ್ದು, ಇಟ್ಟಿಗೆ ಕಾರ್ಖಾನೆಗಳಲ್ಲಿ ಕಾರ್ಯನಿರ್ವಹಿಸಿದ ನಂತರ ತಮ್ಮ ಗ್ರಾಮಗಳಿಗೆ ಹಿಂದಿರುಗುತ್ತಿದ್ದರು ಎಂದು ಪೆÇಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.