ಬಿವಂಡಿ(ಮಹಾರಾಷ್ಟ್ರ), ಜೂ, 12-ರಾಷ್ಟ್ರಪಿತ ಮಹಾತ್ಮಗಾಂಧಿಯವರ ಹತ್ಯೆಗೆ ಆರ್‍ಎಸ್‍ಎಸ್ ಕಾರಣ ಎಂದು ಆರೋಪಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಗುರಿಯಾಗಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ ವಿರುದ್ಧ ಮಹಾರಾಷ್ಟ್ರದ ಬಿವಂಡಿ ನ್ಯಾಯಾಲಯ ಇಂದು ಆರೋಪಗಳನ್ನು ದಾಖಲಿಸಿದೆ.
ಭಾರತೀಯ ದಂಡ ಸಂಹಿತೆ ಸೆಕ್ಷನ್ 499 ಮತ್ತು 500ರಡಿ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ನ್ಯಾಯಾಲಯ ದೋಷಾರೋಪಗಳನ್ನು ದಾಖಲಿಸಿದೆ.
ಇಂದು ಖುದ್ದು ನ್ಯಾಯಾಧೀಶರ ಮುಂದೆ ಆಗಮಿಸಿದ ಹಾಜರಾದ ರಾಹುಲ್‍ಗಾಂಧಿ ತಾವು ಈ ಪ್ರಕರಣದಲ್ಲಿ ತಪ್ಪಿತಸ್ಥರಲ್ಲ ಎಂದು ಹೇಳಿದ್ದಾರೆ.
ಗಾಂಧಿಯವರ ಹತ್ಯೆಗೆ ಬಲಪಂಥೀಯ ಆರ್‍ಎಸ್‍ಎಸ್ ಕಾರಣ ಎಂದು ಸಭೆಯೊಂದರಲ್ಲಿ ರಾಹುಲ್ ನೀಡಿದ್ದರೆನ್ನಲಾದ ಹೇಳಿಕೆ ವಿರುದ್ಧ ರಾಷ್ಟ್ರೀಯ ಸ್ವಯಂಸೇವಾ ಸಂಘದ ಕಾರ್ಯಕರ್ತ ರಾಜೇಶ್ ಕುಂಟೆ ಎಂಬುವರು ಬಿವಂಡಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಈ ಪ್ರಕರಣ ಕುರಿತು ಇಂದು ವಿಚಾರಣೆಗೆ ರಾಹುಲ್ ಖುದ್ದಾಗಿ ಹಾಜರಾದರು.
ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ ಈ ಪ್ರಕರಣದಲ್ಲಿ ರಾಹುಲ್ ವಿರುದ್ಧ ವಿಚಾರಣೆ ಆರಂಭವಾಗಿದೆ.
ನ್ಯಾಯಾಲಯವು ರಾಹುಲ್ ವಿರುದ್ಧ ದೋಷಾರೋಪಣೆ ಮಾಡಿರುವುದರಿಂದ ಈ ಪ್ರಕರಣದಲ್ಲಿ ಕಾನೂನು ಸಮರ ಶುರುವಾಗಿದೆ.