ಸರ್ಕಾರಿ ಬಂಗಲೆ ಬಗ್ಗೆ ಮಕ್ಕಳಿಬ್ಬರಿಗೆ ದೇವೇಗೌಡರು ನೀಡಿದ ಸಲಹೆ ಏನು?

ಬೆಂಗಳೂರು: ಯಾವುದೇ ಕಾರಣಕ್ಕೂ ಸರ್ಕಾರಿ ಬಂಗಲೆಗಳು ಬೇಡವೇ ಬೇಡ. ಸರ್ಕಾರಿ ಬಂಗಲೆಗಳ ವಾಸ್ತು ಸರಿ ಇಲ್ಲ, ಅಲ್ಲಿ ವಾಸ್ತವ್ಯ ಮಾಡೋದು ಬೇಡ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮಕ್ಕಳಾದ ಹೆಚ್.ಡಿ.ಕುಮಾರಸ್ವಾಮಿ ಮತ್ತು ಹೆಚ್.ಡಿ.ರೇವಣ್ಣ ಅವರಿಗೆ ಸಲಹೆ ನೀಡಿದ್ದಾರಂತೆ.

ನಮ್ಮ ಮನೆಗಳಲ್ಲಿ ವಾಸ್ತು ಚೆನ್ನಾಗಿದೆ ಅಲ್ಲೇ ಇರಿ ಎಂದೂ ಮಕ್ಕಳಿಗೆ ಗೌಡರು ಸಲಹೆ ನೀಡಿದ್ದು, ಆದರೆ ಹಾಲಿ ಇರುವ ಖಾಸಗಿ ನಿವಾಸಗಳಲ್ಲಿ ಜನರು, ಕಾರ್ಯಕರ್ತರನ್ನು ತಡೆದುಕೊಳ್ಳಲು ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಮತ್ತು ರೇವಣ್ಣ ವಾಸ್ತು ಸರಿ ಇರುವಂತಹ ದೊಡ್ಡ ಬಂಗಲೆಗಳನ್ನು ಹುಡುಕುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.

ಈ ಹಿಂದೆ ದೇವೇಗೌಡರು ಸಿಎಂ ಆಗಿದ್ದಾಗ ಸರ್ಕಾರಿ ಬಂಗಲೆ ಅನುಗ್ರಹದಲ್ಲಿದ್ದರು. ಬಳಿಕ ಅದೇ ಅನುಗ್ರಹ ನಿವಾಸದಲ್ಲಿ ವಸತಿ ಸಚಿವರಾಗಿದ್ದಾಗ ರೇವಣ್ಣ ಸಹ ವಾಸವಿದ್ದರು. ಇನ್ನು 2006ರಲ್ಲಿ ಸಿಎಂ ಆದಾಗ ಹೆಚ್.ಡಿ.ಕುಮಾರಸ್ವಾಮಿ ಕೂಡ ಅನುಗ್ರಹದ ನಿವಾಸದಲ್ಲಿಯೇ ವಾಸವಾಗಿದ್ದರು.

ಸರ್ಕಾರಿ ಬಂಗಲೆಗೆ ಬೇಡಿಕೆ: ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಮ್ಮ ವಾಸ್ತವ್ಯಕ್ಕೆ ರೇಸ್‍ಕೋರ್ಸ್ ರಸ್ತೆಯಲ್ಲಿರುವ ‘ರೇಸ್ ವ್ಯೂ ಕಾಟೇಜ್’ ಹಂಚಿಕೆ ಮಾಡುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾ ಅವರಿಗೆ ಪತ್ರ ಬರೆದಿದ್ದಾರೆ. ಈ ಹಿಂದೆ ಮಾಜಿ ಸಚಿವ ರಮಾನಾಥ್ ರೈ ಇದೇ ನಿವಾಸದಲ್ಲಿ ವಾಸವಾಗಿದ್ದರು. ಆದರೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಮಾನಾಥ ರೈ ಸೋತಿರುವ ಕಾರಣ ಆರು ತಿಂಗಳಲ್ಲಿ ರೇಸ್ ವ್ಯೂ ಕಾಟೇಜ್ ಖಾಲಿ ಮಾಡಬೇಕಿದೆ.

2004ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾಗ ಯಡಿಯೂರಪ್ಪ ಇದೇ ನಿವಾಸದಲ್ಲಿ ವಾಸವಾಗಿದ್ದರು. ನಂತರ ಇದೇ ಮನೆಯಲ್ಲಿಯೇ ಇದ್ದಾಗ ಉಪ ಮುಖ್ಯಮಂತ್ರಿ ಮತ್ತು ಸಿಎಂ ಸ್ಥಾನಕ್ಕೆ ಏರಿದ್ದರು. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪರಿಗೆ ರೇಸ್ ವ್ಯೂ ಕಾಟೇಜ್ ಅದೃಷ್ಟ ಮನೆ ಎಂದು ಹೇಳಲಾಗುತ್ತಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ