ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಬುಲೆಟ್ ಟ್ರೈನ್ ಯೋಜನೆ ವಿಳಂಬ!

ಮುಂಬೈ, ಜೂ.12- ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಬುಲೆಟ್ ಟ್ರೈನ್ ಯೋಜನೆ ಈ ವರ್ಷ ಸಾಕಾರವಾಗುವ ಲಕ್ಷಣಗಳು ಕಾಣುತ್ತಿಲ್ಲ.
ಮುಂಬೈ-ಅಹಮದಾಬಾದ್ ನಡುವೆ ಸಂಪರ್ಕ ಕಲ್ಪಿಸುವ ಸುಮಾರು 1.7 ಬಿಲಿಯನ್ ವೆಚ್ಚದ ದೇಶದ ಮೊಟ್ಟಮೊದಲ ಬುಲೆಟ್ ಟ್ರೈನ್ ಯೋಜನೆಗೆ ಭೂಮಿ ನೀಡಲು ಮಹಾರಾಷ್ಟ್ರದಲ್ಲಿ ಕೆಲ ರೈತರು ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಯೋಜನೆ ವಿಳಂಬವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜಪಾನ್ ದೇಶದೊಂದಿಗೆ ಮಾಡಿಕೊಂಡಿರುವ ಒಪ್ಪಂದದಂತೆ ಈ ವರ್ಷದ ಡಿಸೆಂಬರ್ ಅಂತ್ಯಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಮುಗಿದ ಬಳಿಕ ಯೋಜನೆಯ ಅನುಷ್ಠಾನವಾಗಬೇಕಿತ್ತು.
ಆದರೆ, ರೈಲು ಹಾದು ಬರುವ ಮಹಾರಾಷ್ಟ್ರದ ಫಲ್ಗರ್ ಸೇರಿದಂತೆ ಮತ್ತಿತರ ಕಡೆ ಇಲ್ಲಿನ ರೈತರು ಯೋಜನೆಗೆ ಭೂಮಿ ಬಿಟ್ಟುಕೊಡಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ವಿಶೇಷವಾಗಿ ಮಾವು ಮತ್ತು ಸಪೆÇೀಟ ಬೆಳೆ ಬೆಳೆಯುವ ರೈತರು ತಮಗೆ ಸರ್ಕಾರ ನೀಡುತ್ತಿರುವ ಪರಿಹಾರ ಸಾಲದು, ಹೀಗಾಗಿ ಈ ಯೋಜನೆಗೆ ನಾವು ಜಮೀನು ಬಿಟ್ಟುಕೊಡುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ.
ರೈತರ ಹೋರಾಟಕ್ಕೆ ಇಲ್ಲಿನ ಸ್ಥಳೀಯ ರಾಜಕೀಯ ಪಕ್ಷಗಳ ಮುಖಂಡರು ಕೈ ಜೋಡಿಸಿರುವುದರಿಂದ ಡಿಸೆಂಬರ್ ತಿಂಗಳ ಅಂತ್ಯದೊಳಗೆ ಭೂ ಸ್ವಾಧೀನ ಪ್ರಕ್ರಿಯೆ ಮುಗಿಯುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಫಲ್ಗರ್ ವ್ಯಾಪ್ತಿಯಲ್ಲಿ ಈ ಯೋಜನೆಯು 108 ಕಿ.ಮೀ. ಇರುವುದರಿಂದ ರೈತರ ಪ್ರತಿಭಟನೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ ಮೂರು ದಶಕಗಳಿಂದ ನಾವು ಮಾವು ಮತ್ತು ಸಪೆÇೀಟ ಬೆಳೆದು ಜೀವನ ನಡೆಸುತ್ತಿದ್ದೇವೆ. ಸರ್ಕಾರ ಈಗ ಇದ್ದಕ್ಕಿದ್ದಂತೆ ಜಮೀನು ಬಿಟ್ಟುಕೊಡಬೇಕೆಂದರೆ ನಾವು ಜೀವನ ನಿರ್ವಹಣೆಗೆ ಏನು ಮಾಡಬೇಕೆಂದು ರೈತರು ಪ್ರಶ್ನಿಸಿದ್ದಾರೆ.
ಸರ್ಕಾರ ಕೊಡುತ್ತಿರುವ ಪರಿಹಾರ ಏನಕ್ಕೂ ಸಾಲುವುದಿಲ್ಲ. ಇಡೀ ಜಮೀನೇ ಹೋಗುವುದರಿಂದ ನಮಗೆ ಪರ್ಯಾಯ ವ್ಯವಸ್ಥೆ ಇಲ್ಲದಂತಾಗಿದೆ. ಮಾರುಕಟ್ಟೆ ದರದಲ್ಲಿ ಪರಿಹಾರ ನೀಡಿದರೆ ಜೀವನ ನಿರ್ವಹಣೆ ದುಸ್ತರವಾಗುತ್ತದೆ ಎಂದು ರೈತರು ತಮ್ಮ ನೋವು ಹಂಚಿಕೊಂಡಿದ್ದಾರೆ.
ಅಧಿಕಾರಿಗಳು ರೈತರನ್ನು ಮನವೊಲಿಸುವ ಪ್ರಯತ್ನ ಮಾಡುತ್ತಿದ್ದರಾದರೂ ಪ್ರತಿಭಟನೆ ಕಾವು ಹೆಚ್ಚಾಗುತ್ತಿರುವುದರಿಂದ ಬುಲೆಟ್ ಟ್ರೈನ್ ಯೋಜನೆ ಸಾಕಾರಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ.
ನಾವುಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯ ಮಾಡಲು ಬಿಡುವುದಿಲ್ಲ ಎಂದು ರಾಜಕೀಯ ಪಕ್ಷಗಳು ಹೇಳಿರುವುದರಿಂದ ಬುಲೆಟ್ ಟ್ರೈನ್ ಯೋಜನೆ ಕಾಗದದ ಮೇಲೆ ಉಳಿದರೂ ಅಚ್ಚರಿಯಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ