ಥಾಣೆ, ಜೂ.12-ಯುವ ಜನಾಂಗಕ್ಕೆ ಉದ್ಯೋಗ ಒದಗಿಸುತ್ತಿಲ್ಲ, ರೈತರ ಹಿತಾಸಕ್ತಿ ರಕ್ಷಿಸುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದ ವಿರುದ್ಧ ನನ್ನ ಹೋರಾಟ ಮುಂದುವರಿಯಲಿದೆ ಎಂದು ಹೇಳಿದ್ಧಾರೆ.
ತಮ್ಮ ವಿರುದ್ಧ ಆರ್ಎಸ್ಎಸ್ ಕಾರ್ಯಕರ್ತನೊಬ್ಬ ಹೂಡಿದಿರುವ ಕ್ರಿಮಿನಲ್ ಮಾನಹಾನಿ ಪ್ರಕರಣದ ವಿಚಾರಣೆಗಾಗಿ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬಿವಂಡಿ ಕೋರ್ಟ್ಗೆ ಆಗವಮಿಸಿದ ಅವರು ನ್ಯಾಯಾಲಯದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದರು.
ನನ್ನ ವಿರುದ್ಧ ಆರ್ಎಸ್ಎಸ್ ಮತ್ತು ಬಿಜೆಪಿ ಬೇಕಾದಷ್ಟು ಕೇಸುಗಳನ್ನು ಹಾಕಲಿ. ಅವುಗಳನ್ನು ಎದುರಿಸಲು ನಾನು ಸಿದ್ಧ ಎಂದು ರಾಹುಲ್ ಸವಾಲು ಹಾಕಿದರು.
ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ದೋಷಪೂರಿತ ನೀತಿಗಳ ವಿರುದ್ಧ ನನ್ನ ಹೋರಾಟ ಮುಂದುವರಿಯಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷರು ಈ ಸಂದರ್ಭದಲ್ಲಿ ತಿಳಿಸಿದರು.