
ಬೆಂಗಳೂರು, ಜೂ.12-ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಆಡಳಿತದಲ್ಲಿ ಲಯ ಕಂಡುಕೊಳ್ಳುತ್ತಿದ್ದಂತೆಯೇ ಇದುವರೆಗೆ ಮಂತ್ರಿಗಳಾಗದ ಇಪ್ಪತ್ತೈದಕ್ಕೂ ಹೆಚ್ಚು ಶಾಸಕರಿಗೆ ಪ್ರಮುಖ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಲು ಕೈ ಪಾಳೆಯ ನಿರ್ಧರಿಸಿದೆ.
ಈ ತಿಂಗಳ ಹದಿನಾಲ್ಕರಂದು ನಡೆಯಲಿರುವ ಸಿದ್ಧರಾಮಯ್ಯ ಅಧ್ಯಕ್ಷತೆಯ ಸಮನ್ವಯ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರಿಗೆ ನೀಡಬೇಕಾದ ವಿವಿಧ ನಿಗಮ,ಮಂಡಳಿಗಳ ಕುರಿತು ನಿರ್ಧರಿಸಲಾಗುವುದು ಎಂದು ಉನ್ನತ ಮೂಲಗಳು ಹೇಳಿವೆ.
ಉಪಮುಖ್ಯಮಂತ್ರಿ ಜಿ.ಪರಮೇಶ್ವರ್,ಸಿದ್ಧರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮತ್ತಿತರ ಪ್ರಮುಖರಿರುವ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಪಾಲಿಗೆ ಬರುವ ನಿಗಮ,ಮಂಡಳಿಗಳ ಸಂಖ್ಯೆ ಎಷ್ಟು?ಅನ್ನುವ ಕುರಿತೂ ವಿವರ ಪಡೆಯಲಾಗುತ್ತದೆ.
ನಿಗಮ,ಮಂಡಳಿಗಳ ಸಂಖ್ಯೆ ಹೆಚ್ಚಿದ್ದರೂ ಅದರಲ್ಲಿ ಪ್ರಮುಖವಾಗಿ ಅರವತ್ತು ನಿಗಮ ಮಂಡಳಿಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದು ಈ ಪೈಕಿ ತನ್ನ ಪಾಲಿಗೆ ಮೂವತ್ತೈದರಷ್ಟು ನಿಗಮ,ಮಂಡಳಿಗಳ ಅಧ್ಯಕ್ಷ ಸ್ಥಾನ ಸಿಗಬಹುದು ಎಂಬುದು ಕಾಂಗ್ರೆಸ್ ಪಕ್ಷದ ಲೆಕ್ಕಾಚಾರ.
ಈ ಹಿಂದೆ ಮಂತ್ರಿಗಳಾಗಿರುವವರು ಪಕ್ಷದ ಕೆಲಸಕ್ಕೆ ಗಮನ ಹರಿಸಬೇಕು. ಮುಂದಿನ ಲೋಕಸಭಾ ಚುನಾವಣೆಯ ಮೇಲೆ ಗಮನ ಕೇಂದ್ರೀಕರಿಸಬೇಕು ಎಂದು ಅಂದಿನ ಸಭೆ ಸೂಚಿಸಲಿದೆ.
ಸಮ್ಮಿಶ್ರ ಸರ್ಕಾರ ರಚನೆ ಮಾಡುವಾಗ ಇಂತಿಂತಹ ಮಾನದಂಡಗಳೇ ಕೆಲಸ ಮಾಡುತ್ತವೆ ಎಂದು ಹೇಳಲಾಗದು.ಆದರೆ ಇಂತಹ ಸಂಕಷ್ಟ ಕಾಲದಲ್ಲಿ ಮಂತ್ರಿಗಿರಿ ಸಿಗಲಿಲ್ಲ ಎಂದು ಬೀದಿಗಿಳಿಯುವ ಕೆಲಸವಾದರೆ ನಾಡಿನ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ.
ವಾಸ್ತವವಾಗಿ ಈ ಸರ್ಕಾರದಲ್ಲಿ ಮಂತ್ರಿಗಳಾಗಲು ಹಲವರಿಗೆ ಅರ್ಹತೆ ಇದೆ.ಮಂತ್ರಿಗಳಾಗಿ ಕೆಲಸ ಮಾಡಿದ ಅನುಭವವೂ ಹಲವರಿಗಿದೆ.ಆದರೆ ಈ ಸಂದರ್ಭದಲ್ಲಿ ಪಕ್ಷಕ್ಕಾಗಿ ಕೆಲಸ ಮಾಡುವುದು,ಮುಂದೆ ಬರುವ ಒಳ್ಳೆಯ ದಿನಗಳಿಗೆ ಕಾಯುವುದು ಅನಿವಾರ್ಯ.
ಆದರೆ ಈ ಮಧ್ಯೆ ಎರಡು ಬಾರಿ,ಮೂರು ಬಾರಿ ಶಾಸಕರಾದವರು ಇದುವರೆಗೆ ಮಂತ್ರಿಗಿರಿಯನ್ನೂ ಪಡೆದಿಲ್ಲ.ಹೀಗಾಗಿ ಅಂತಹ ಪ್ರಮುಖ ಶಾಸಕರನ್ನು ಗುರುತಿಸಿ,ಆದ್ಯತೆಯ ಮೇಲೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡುವುದು ಕಾಂಗ್ರೆಸ್ ಪಕ್ಷದ ಲೆಕ್ಕಾಚಾರ.
ಇದಾದ ನಂತರ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಗುರುತಿಸಿ ಎಲ್ಲ ಜಿಲ್ಲೆಗಳಿಗೆ ಆದ್ಯತೆ ನೀಡುವ ಕೆಲಸವಾಗಬೇಕು.ಹಿಂದಿನ ಸರ್ಕಾರದ ಅವಧಿಯಲ್ಲಿ ಸೃಷ್ಟಿಯಾಗದೆ ಹೋಗಿದ್ದ ರಾಜಕೀಯ ಸಲಹೆಗಾರರ ಹುದ್ದೆಯಿಂದ ಹಿಡಿದು,ಹಲವು ಹುದ್ದೆಗಳನ್ನು ಸೃಷ್ಟಿಸಬೇಕು ಎಂಬ ಕುರಿತೂ ಸಮನ್ವಯ ಸಮಿತಿ ಸಭೆಯಲ್ಲಿ ಮಾತುಕತೆ ನಡೆಯುವ ಸಾಧ್ಯತೆ ಇದೆ.