ಬೆಂಗಳೂರು, ಜೂ, 12-ನೈರುತ್ಯ ಮುಂಗಾರು ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಆರ್ಭಟಿಸುತ್ತಿದ್ದರೆ, ರಾಜ್ಯದ ಒಳನಾಡಿನಲ್ಲಿ ಇಳಿಮುಖವಾಗುತ್ತಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್‍ರೆಡ್ಡಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಬೀಳುತ್ತಿರುವ ಭಾರೀ ಮಳೆ ಮುಂದುವರೆಯುವ ಮುನ್ಸೂಚನೆಗಳಿವೆ. ಆದರೆ ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಜೂ.16ರವರೆಗೂ ಮಳೆ ಇಳಿಕೆಯಾಗಲಿದೆ. ಮೇಲ್ಮೈಯಲ್ಲಿ ಬಲವಾದ ಗಾಳಿ ಬೀಸುವುದರ ಜೊತೆಗೆ ಮೋಡ ಕವಿದ ವಾತಾವರಣ ಕಂಡುಬರಲಿದೆ.
ಮಲೆನಾಡು ಭಾಗದಲ್ಲಿ ನಿನ್ನೆ 350 ಮಿಲಿಮೀಟರ್‍ನಷ್ಟು ಭಾರೀ ಮಳೆಯಾದ ವರದಿಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 40 ಸೆಂಟಿಮೀಟರ್‍ವರೆಗೂ ಮಳೆಯಾಗಿದೆ.
ದಾಖಲೆಯ ಮಳೆ:
ಮುಂಗಾರು ಪೂರ್ವ ಮಳೆ ಈ ಬಾರಿ ಕಳೆದ 10 ವರ್ಷದಲ್ಲೇ ಅಧಿಕ ಪ್ರಮಾಣದ ಮಳೆಯಾಗಿದೆ. 2008ರಲ್ಲಿ ಮುಂಗಾರು ಪೂರ್ವ ಮಳೆ ಚೆನ್ನಾಗಿ ಬಿದ್ದಿತ್ತು. ಈ ಬಾರಿ ಶೇ.54ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಅದೇ ರೀತಿ ಮುಂಗಾರು ಕೂಡ ಶೇ.95ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ರಾಜ್ಯಾದ್ಯಂತ ಮಳೆಯಾಗುತ್ತಿದ್ದು, ಇದುವರೆಗೂ 110 ಮಿಲಿಮೀಟರ್‍ನಷ್ಟು ಮಳೆಯಾಗಿದೆ. ಇದುವರೆಗಿನ ಮುಂಗಾರು ವಾಡಿಕೆ ಮಳೆ ಪ್ರಮಾಣ 56 ಮಿಲಿಮೀಟರ್‍ನಷ್ಟು . ಆದರೆ ವಾಡಿಕೆಯ ದುಪ್ಪಟ್ಟು ಮಳೆಯಾಗಿದೆ.
ರಾಜ್ಯದಲ್ಲಿ ಒಳ್ಳೆಯ ಮಳೆಯಾಗುತ್ತಿರುವುದರಿಂದ ಕೃಷಿ ಚಟುವಟಿಕೆಗಳು ಚುರುಕುಗೊಂಡು ವಾಡಿಕೆಗಿಂತ ಹೆಚ್ಚು ಬಿತ್ತನೆಯಾಗಿದೆ. ಅದೇ ರೀತಿ ಜೂನ್ ತಿಂಗಳಿನಲ್ಲಿ ಲಿಂಗನಮಕ್ಕಿ, ಭದ್ರಾ, ತುಂಗಭದ್ರಾ, ಹೇಮಾವತಿ, ಹಾರಂಗಿ, ಕಬಿನಿ, ಕೆಆರ್‍ಎಸ್ ಜಲಾಶಯಗಳ ಒಳಹರಿವಿನ ಪ್ರಮಾಣವೂ ಗಣನೀಯವಾಗಿ ಏರಿಕೆ ಕಂಡಿದೆ ಎಂದು ಹೇಳಿದರು.