ಬೆಂಗಳೂರು, ಜೂ, 12-ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷದ ವತಿಯಿಂದ ಸ್ಪರ್ಧಿಸಿ ಸೋತಿರುವ ಅಭ್ಯರ್ಥಿಗಳು ಹಾಗೂ ನೂತನ ಶಾಸಕರ ಸಭೆಯನ್ನು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಜೂ.14ರಂದು ಕರೆದಿದ್ದಾರೆ.
ನಗರದ ಜೆ.ಪಿ.ಭವನದಲ್ಲಿ ಗುರುವಾರ ಬೆಳಗ್ಗೆ 10.30ಕ್ಕೆ ಸಭೆ ಕರೆದಿದ್ದು, ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶದ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ.
ಅಲ್ಲದೆ, ಮುಂಬರುವ ಲೋಕಸಭೆ ಚುನಾವಣೆ, ವಿಧಾನಸಭೆಯ ಉಪಚುನಾವಣೆಗಳ ಸಿದ್ಧತೆ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‍ಗೆ ನಿರೀಕ್ಷಿತ ಗೆಲುವು ಸಿಗದಿರಲು ಕಾರಣವೇನು ಎಂಬ ಬಗ್ಗೆ ಶಾಸಕರು ಹಾಗೂ ಸೋತ ಅಭ್ಯರ್ಥಿಗಳೊಂದಿಗೆ ಚರ್ಚೆ ಮಾಡಲಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡುವುದು, ಚುನಾವಣೆಯಲ್ಲಿ ಸೋಲಿನ ಕಾರಣಗಳನ್ನು ಪತ್ತೆ ಹಚ್ಚಿ ಜನರ ವಿಶ್ವಾಸ ಗಳಿಸಲು ಮಾಡಬೇಕಿರುವ ಕಾರ್ಯತಂತ್ರಗಳ ಮಾರ್ಗದರ್ಶನವನ್ನು ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕಾಂಗ್ರೆಸ್‍ನೊಂದಿಗೆ ಜೊತೆಗೂಡಿ ಸರ್ಕಾರ ರಚನೆ ಮಾಡಿದ್ದು, ಮುಂಬರುವ ಚುನಾವಣೆಯಲ್ಲಿ ಉಭಯ ಪಕ್ಷಗಳ ನಡುವೆ ಆಗಬಹುದಾದ ಹೊಂದಾಣಿಕೆಯ ಬಗ್ಗೆಯೂ ಚರ್ಚೆ ನಡೆಸುವ ಸಾಧ್ಯತೆಗಳಿವೆ.
ಅದೇ ದಿನ ಮಧ್ಯಾಹ್ನ ಪಕ್ಷದ ಮುಸ್ಲಿಂ ಮುಖಂಡರ ಸಭೆಯನ್ನು ನಡೆಸಲಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕಾಗಿರುವ ಹಿನ್ನಡೆ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.