ಬೆಂಗಳೂರು, ಜೂ.12-ಗಾರ್ಮೆಂಟ್ಸ್ ನೌಕರರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ. ಮಾಲೀಕರು ಮತ್ತು ನೌಕರರಿಗೆ ಪೂರಕವಾಗುವಂತಹ ತೀರ್ಮಾನವನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ವೇತನ ಹೆಚ್ಚಳಕ್ಕೆ ಆಗ್ರಹಿಸಿ ಗಾರ್ಮೆಂಟ್ಸ್ ನೌಕರರ ಸಂಘದ ಪದಾಧಿಕಾರಿಗಳು ಗೃಹ ಕಚೇರಿ ಕೃಷ್ಣಾದಲ್ಲಿಂದು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕೂವರೆ ಲಕ್ಷಕ್ಕೂ ಹೆಚ್ಚು ಗಾರ್ಮೆಂಟ್ಸ್ ನೌಕರರು ಕೆಲಸ ಮಾಡುತ್ತಿದ್ದಾರೆ. ಸಾಕಷ್ಟು ಮಹಿಳೆಯರು ಈ ಉದ್ಯೋಗ ಅವಲಂಬಿಸಿದ್ದಾರೆ. ನೌಕರರು ಮತ್ತು ಮಾಲೀಕರ ಹಿತದೃಷ್ಟಿಯಿಂದ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
ಇನ್ನೂ ಹೆಚ್ಚು ಗಾರ್ಮೆಂಟ್ಸ್ ಸ್ಥಾಪನೆಯಾಗಬೇಕು, ಲಕ್ಷಾಂತರ ಉದ್ಯೋಗಗಳು ದೊರೆಯುವಂತಾಗಬೇಕು. ಚೀನಾ ಗಾರ್ಮೆಂಟ್ಸ್‍ಗಳು ಭಾರತದತ್ತ ಮುಖ ಮಾಡಿವೆ. ನಮ್ಮಲ್ಲಿರುವವರಿಗೆ ಹೆಚ್ಚು ಉದ್ಯೋಗ ದೊರೆಯುವಂತಾಗಬೇಕು, ನೌಕರರಿಗೆ ಉತ್ತಮ ವೇತನ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
ಕಾರ್ಮಿಕ ಸಚಿವ ವೆಂಕಟರಮಣಪ್ಪ , ಸಂಘದ ಪ್ರತಿನಿಧಿಗಳು, ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.