ದೇವನಹಳ್ಳಿ: ಜೂ-12:ಅನುಮತಿಯಿಲ್ಲದೆ ಕಾನೂನು ಬಾಹಿರವಾಗಿ ಗ್ರಾನೈಟ್ ತುಂಬಿದ್ದ ಲಾರಿಯನ್ನು ಬಿಡುವಂತೆ ಆದೇಶಿಸಿದ ಮೇಲಾಧಿಕಾರಿ ವಿರುದ್ಧ ಪಿಎಸ್‌ಐ ಗರಂ ಆಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ರಾಮನಾಥಪುರದಲ್ಲಿ ನಡೆದಿದೆ.
ರಾಜಕೀಯ ಮುಖಂಡರೊಬ್ಬರ ಕಡೆಯವರು ಅನುಮತಿ ಪಡೆಯದೆ ಅಕ್ರಮವಾಗಿ ಗ್ರಾನೈಟ್ ಸಾಗಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ವಿಶ್ವನಾಥಪುರ ಪೊಲೀಸರಿಗೆ ಸಿಕ್ಕಿತ್ತು. ಅಂತೆಯೇ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಪೊಲೀಸರ ಕಾರ್ಯಕ್ಕೆ ಅಡ್ಡಿಪಡಿಸಿದ ದಂಧೆಕೋರರು ಸಿಬ್ಬಂದಿ ಮೇಲೆ ದಬ್ಬಾಳಿಕೆ ನಡೆಸಿದ್ದರು. ಲಾರಿ ತೆಗೆದುಕೊಂಡು ಹೋಗದಂತೆ ಪೊಲೀಸರಿಗೆ ಅಡ್ಡಿಪಡಿಸಿದ್ದರು ಎಂದು ಗೊತ್ತಾಗಿದೆ.
ನಂತರ ಈ ವಿಷಯ ವಿಶ್ವನಾಥಪುರ ಪಿಎಸ್‌ಐ ಶ್ರೀನಿವಾಸ್ ಅವರಿಗೆ ತಿಳಿದಿತ್ತು. ಆಗ ತಕ್ಷಣವೇ ಪಿಎಸ್‌ಐ ಶ್ರೀನಿವಾಸ್ ಸ್ಥಳಕ್ಕೆ ಭೇಟಿ ಕೊಟ್ಟಿದ್ದರು. ಈ ವೇಳೆ ಕೂಡ ಪೊಲೀಸರೊಂದಿಗೆ ದಂಧೆಕೋರರು ವಾಗ್ವಾದ ನಡೆಸಿ ಆವಾಜ್ ಹಾಕಿದ್ದಾರೆ. ಅಲ್ಲದೇ, ಪಿಎಸ್‌ಐಗೆ ಮೇಲಾಧಿಕಾರಿಯೊಬ್ಬರ ಮುಖಾಂತರ ಒತ್ತಡ ಹೇರುವ ತಂತ್ರ ಕೂಡ ನಡೆಸಿದ್ದಾರೆ. ನಂತರ ಅವರಿಗೆ ಫೋನ್ ಮಾಡಿ, ಪಿಎಸ್‌ಐ ಶ್ರೀನಿವಾಸ್‌ಗೆ ಮೊಬೈಲ್ ಕೊಟ್ಟಿದ್ದಾರೆ.
ಈ ವೇಳೆ ಮಾತನಾಡಿದ ಅವರು ಲಾರಿ ಬಿಟ್ಟು ಕಳುಹಿಸುವಂತೆ ಪಿಎಸ್‌ಐ ಶ್ರೀನಿವಾಸ್‌ಗೆ ಸೂಚಿಸಿದ್ದಾರೆ. ಆದರೆ ಲಾರಿಗಳಲ್ಲಿ ಗ್ರಾನೈಟ್ ಸಾಗಿಸಲು ಅನುಮತಿಯಿಲ್ಲವೆಂದು ಪಿಎಸ್‌ಐ ಶ್ರೀನಿವಾಸ್ ಮೇಲಾಧಿಕಾರಿಗೆ ತಿಳಿಸಿದ್ದಾರೆ. ಆದರೂ, ಲಾರಿ ಬಿಡುವಂತೆ ಸೂಚಿಸಿದ್ದರಿಂದ ಪಿಎಸ್‌ಐ ಶ್ರೀನಿವಾಸ್ ಗರಂ ಆಗಿದ್ದಾರೆ. ಮೇಲಾಧಿಕಾರಿ ವಿರುದ್ದ ಪಿಎಸ್‌ಐ ಸಿಡಿಮಿಡಿಗೊಂಡಿರುವ ದೃಶ್ಯಗಳು ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿವೆ.
ಸದ್ಯ ಪಿಎಸ್‌ಐ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಿಎಸ್‌ಐ ಕಾರ್ಯಕ್ಕೆ ಸಾರ್ವಜನಿಕರಿಂದ ಸಹ ಮೆಚ್ಚುಗೆ ವ್ಯಕ್ತವಾಗಿದೆ.