ಸಿಂಗಾಪುರ:ಜೂ-12: ಸಿಂಗಾಪುರ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹಾಗೂ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಐತಿಹಾಸಿಕ ಭೇಟಿ ಕೊನೆಗೂ ಫಲಪ್ರದವಾಗಿದೆ. ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ‘ಅಣ್ವಸ್ತ್ರ ನಿಶ್ಯಸ್ತ್ರೀಕರಣ’ಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.
ಸಿಂಗಾಪುರದಲ್ಲಿ ಇಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೊಂದಿಗಿನ ಭೇಟಿ ಸಂದರ್ಭದಲ್ಲಿ ಉತ್ತರ ಕೊರಿಯ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹಲವು ಮಹತ್ವದ ದಾಖಲೆಗಳಿಗೆ ಸಹಿ ಹಾಕಿದ್ದಾರೆ. ಈ ಪೈಕಿ ಇಡೀ ಶೃಂಗಸಭೆಯ ಕೇಂದ್ರ ಬಿಂದು ಮತ್ತು ಇಡೀ ವಿಶ್ವವೇ ಎದುರು ನೋಡುತ್ತಿರುವ ‘ಅಣ್ವಸ್ತ್ರ ನಿಶ್ಯಸ್ತ್ರೀಕರಣ’ ಒಪ್ಪಂದಕ್ಕೆ ಕಿಮ್ ಜಾಂಗ್ ಉನ್ ಸಮ್ಮತಿ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.
ಮತ್ತೊಂದು ಪ್ರಮುಖ ಒಪ್ಪಂದಕ್ಕೆ ಕಿಮ್ ಜಾಂಗ್ ಉನ್ ಸಹಿ ಹಾಕಿದ್ದು, ದಕ್ಷಿಣ ಕೊರಿಯಾ ಪುನಶ್ಚೇತನ ಒಪ್ಪಂದಕ್ಕೂ ಸಮ್ಮತಿ ಸೂಚಿಸಿ ಸಹಿ ಹಾಕಿದ್ದಾರೆ ಎನ್ನಲಾಗಿದೆ.
ಸಹಿ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಕಿಮ್ ‘ಅಣ್ವಸ್ತ್ರ ನಿಶ್ಯಸ್ತ್ರೀಕರಣ’ಕ್ಕೆ ಒಪ್ಪಿಗೆ ನೀಡಿದ್ದು, ಶೀಘ್ರ ಆ ಕುರಿತು ಕಾರ್ಯ ಮಗ್ನರಾಗಲಿದ್ದಾರೆ ಎಂದು ಹೇಳಿದರು. ಅಂತೆಯೇ ಕಿಮ್ ಜಾಂಗ್ ಉನ್ ರನ್ನು ವೈಟ್ ಹೌಸ್ ಗೆ ಆಹ್ವಾನಿಸುವಿರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಟ್ರಂಪ್ ಖಂಡಿತಾ ಆಹ್ವಾನಿಸುತ್ತೇನೆ. ಹಳೆಯ ವಿಚಾರಗಳನ್ನು ನಾವು ಮರೆಯಲು ನಿರ್ಣಯ ಕೈಗೊಂಡಿದ್ದೇವೆ. ಇನ್ನು ಮುಂದೆ ಹೊಸ ಬೆಳವಣಿಗೆಯನ್ನು ನೋಡುತ್ತೀರೆ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಕಿಮ್ ಜಾಂಗ್ ಉನ್, ನಿಜಕ್ಕೂ ಇದೊಂದು ಐತಿಹಾಸಿಕ ಸಭೆಯಾಗಿತ್ತು. ಭವಿಷ್ಯದಲ್ಲಿ ಉಭಯ ದೇಶಗಳ ನಡುವಿನ ಬಾಂಧವ್ಯ ನಿರೀಕ್ಷೆ ಮೀರಿ ವೃದ್ಧಿಸಲಿದ್ದು, ಅಮೂಲಾಗ್ರ ಬದಲಾಣೆ ನೋಡಲಿದ್ದೀರಿ ಎಂದು ಹೇಳಿದರು.