
ನವದೆಹಲಿ, ಜೂ.11-ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ದೋಷಪೂರಿತ ನೀತಿಗಳಿಂದಾಗಿ ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಎಂದು ಆರೋಪಿಸಿರುವ ಕೇಂದ್ರ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಧುರೀಣ ಪಿ.ಚಿದಂಬರಂ, ಭಾರತದ ಆರ್ಥಿಕತೆಯ ಚಕ್ರಗಳು ಪಂಕ್ಚರ್ ಆಗಿವೆ ಎಂದು ಟೀಕಿಸಿದ್ದಾರೆ.
ದೆಹಲಿಯಲ್ಲಿ ಇಂದು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಎಸ್ಟಿಯ ದೋಷಪೂರಿತ ಮಾರ್ಗವು ವಾಣಿಜ್ಯ ಮತ್ತು ವ್ಯಾಪಾರದ ಬೇಟೆ ಮುಂದುವರಿಸಿದೆ. ನೋಟು ಅಮಾನ್ಯೀಕರಣದ ದುಷ್ಪರಿಣಾಮಗಳು ನಿರೀಕ್ಷೆಗೂ ಮೀರಿ ತನ್ನ ಕೆಟ್ಟ ಪರಿಣಾಮಗಳನ್ನು ಬೀರಿದೆ ಎಂದು ಆಪಾದಿಸಿದರು.
ಕೇಂದ್ರ ಸರ್ಕಾರ ತಪ್ಪು ನಿರ್ಧಾರಗಳಿಗೆ ಕೃಷಿಕರೂ ಸೇರಿದಂತೆ ಸಮಾಜದ ವಿವಿಧ ವರ್ಗಗಳು ಇಂದು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ರೈತರಿಗೆ ತಮ್ಮ ಉತ್ಪನ್ನಗಳಿಗೆ ಬೆಂಬಲ ಬೆಲೆ ಲಭಿಸುತ್ತಿಲ್ಲ, ಯುವಕರು ನಿರುದ್ಯೋಗಿಗಳಾಗಿದ್ದಾರೆ ಎಂದು ಅವರು ಆರೋಪಿಸಿದರು.
ದೇಶದ ಆರ್ಥಿಕತೆ ಸಾಗುತ್ತಿರುವ ವಾಹನದ ನಾಲ್ಕು ಚಕ್ರಗಳಲ್ಲಿ ಮೂರು ಚಕ್ರಗಳು ಪಂಕ್ಚರ್ ಆಗಿವೆ. ಮೊದಲನೆಯದಾಗಿ ರಫ್ತು: ಕಳೆದ ನಾಲ್ಕು ವರ್ಷಗಳಲ್ಲಿ ಬೆಳವಣಿಗೆ ದರ ನಕರಾತ್ಮಕವಾಗಿದೆ. ಎರಡನೆಯದಾಗಿ ಖಾಸಗಿ ಬಂಡವಾಳ : ಇದಕ್ಕೆ ಮಂಕು ಕವಿದಿದೆ. ಮೂರು ವರ್ಷಗಳಲ್ಲಿ ಒಟ್ಟು ನಿಗದಿತ ಬಂಡವಾಳ ಶೇ.28.5ಕ್ಕೆ ನಿಂತಿದೆ. ಮೂರನೆಯದಾಗಿ ಖಾಸಗಿ ಬಳಕೆ : ಇದು ಕೆಲವು ತಿಂಗಳಿನಿಂದ ತೀವ್ರ ಮಂದಗತಿಯಲ್ಲಿತ್ತು. ಈಗ ಲಘು ಪ್ರಮಾಣದಲ್ಲಿ ಚೇತರಿಸಿಕೊಂಡಿದೆ ಎಂದು ಹಣಕಾಸು ಖಾತೆ ಮಾಜಿ ಸಚಿವರು ವಿಶ್ಲೇಷಣೆ ಮಾಡಿದರು.