
ಕ್ವೆಬೆಕ್ ಸಿಟಿ, ಜೂ.11-ಅಮೆರಿಕ ಸರಕುಗಳ ಮೇಲೆ ಅಧಿಕ ಸುಂಕ ವಿಧಿಸುತ್ತಿರುವ ಭಾರತದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವ್ಯಾಪಾರ ವಹಿವಾಟು ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಜಿ-7 ಶೃಂಗಸಭೆ ಸಂಬಂಧ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮೆರಿಕ ತಮ್ಮ ಪ್ರಥಮ ಆದ್ಯತೆ ಎಂದು ಪುನರುಚ್ಚರಿಸಿದರು. ಇತರ ದೇಶಗಳೊಂದಿಗೆ ನ್ಯಾಯಸಮ್ಮತ ವಾಣಿಜ್ಯ ಸಂಬಂಧಕ್ಕೆ ಅಗತ್ಯವಾದ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುವುದಾಗಿ ಟ್ರಂಪ್ ಸಾರಿದರು.
ಭಾರತದಲ್ಲಿ ಅಮೆರಿಕದ ಕೆಲವು ಸರಕುಗಳಿಗೆ ಅಧಿಕ ತೆರಿಗೆ ವಿಧಿಸಲಾಗುತ್ತಿದೆ. ಶೇ.100ರಷ್ಟು ಸುಂಕ ಹೇರಲಾಗುತ್ತಿದೆ. ಆದರೆ ನಾವು ಆ ದೇಶದ ಮುಖ್ಯ ಸರಕುಗಳಿಗೆ ತೆರಿಗೆ ಹಾಕುತ್ತಿಲ್ಲ. ಈ ಬಗ್ಗೆ ನಾವು ಭಾರತದೊಂದಿಗೆ ಮಾತನಾಡುತ್ತೇವೆ. ಇದಕ್ಕೆ ಆ ದೇಶ ಒಪ್ಪಿ ಸುಂಕ ಇಳಿಸಬೇಕು. ಇಲ್ಲದಿದ್ದರೆ, ಭಾರತದೊಂದಿಗೆ ನಾವು ವ್ಯಾಪಾರ-ವಹಿವಾಟು ನಿಲ್ಲಿಸುತ್ತೇವೆ ಎಂದು ಅವರು ಬೆದರಿಕೆ ಹಾಕಿದ್ದಾರೆ.
ಸುಂಕಗಳು ಇಳಿಕೆಯಾಗಬೇಕು. ಇದರಿಂದ ಜನರಿಗೆ ಅನುಕೂಲವಾಗಬೇಕು. ನಾವು ಒಂದು ರೀತಿಯ ಪಿಗ್ಗಿ ಬ್ಯಾಂಕ್ ಆಗಿದ್ದೇವೆ. ಎಲ್ಲರೂ ನಮ್ಮನ್ನು ಸುಲಿಗೆ ಮಾಡುತ್ತಿದ್ದಾರೆ. ಇದು ಕೊನೆಗೊಳ್ಳಬೇಕು ಎಂದು ಟ್ರಂಪ್ ಗುಡುಗಿದ್ದಾರೆ.