ಬೆಂಗಳೂರು, ಜೂ.11-ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಗಾಂಧಿಭವನಕ್ಕೆ ಕಾಯಕಲ್ಪ ನೀಡಿದ್ದರು. ಇದೀಗ ಗಾಂಧಿಭವನ ರಾಜ್ಯದ 30 ಜಿಲ್ಲೆಗಳಲ್ಲೂ ನಿರ್ಮಾಣವಾಗುತ್ತಿದ್ದು, ಇದರ ಉದ್ಘಾಟನೆ ಅವರ ಕೈಯಿಂದಲೇ ಆಗಬೇಕು ಎಂದು ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ವೂಡೇ ಪಿ.ಕೃಷ್ಣ ಆಶಯ ವ್ಯಕ್ತಪಡಿಸಿದರು.
ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲಬಾರಿಗೆ ಗಾಂಧಿಭವನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಹಿಂದೆ ಗಾಂಧಿಭವನಕ್ಕೆ ಕಾಯಕಲ್ಪ ನೀಡಿದ್ದು, ಇದೀಗ ಅದೇ ಹೆಮ್ಮರವಾಗಿ ಬೆಳೆದಿದೆ. ರಾಜ್ಯದ 30ಜಿಲ್ಲೆಗಳಲ್ಲೂ ಭವನ ನಿರ್ಮಿಸುವ ಪ್ರಕ್ರಿಯೆ ನಡೆಯುತ್ತಿದೆ. ಅದು ಪೂರ್ಣಗೊಂಡ ಬಳಿಕ ಅದನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಉದ್ಘಾಟಿಸಬೇಕು ಎಂದರು.
ಗಾಂಧೀಜಿ ಹಾಗೂ ಕಸ್ತೂರಬಾ ಅವರ 150ನೇ ವರ್ಷಾಚರಣೆಯನ್ನು ಇಡೀ ವರ್ಷ ಅರ್ಥಪೂರ್ಣವಾಗಿ ಆಚರಿಸಲು ಉದ್ದೇಶಿಸಿದ್ದು, ಅದಕ್ಕೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಬೇಕು ಎಂದರು.
ಸಮಾರಂಭದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಗಾಂಧಿ ಶಾಂತಿ ಪ್ರಶಸ್ತಿ ಪುರಸ್ಕøತರಾದ ಚೆನ್ನಮ್ಮಹಳ್ಳಿಕೇರಿ, ನಾಡೋಜ ಪಾಟೀಲ್ ಪುಟ್ಟಪ್ಪ, ಕೇಂದ್ರದ ಮಾಜಿ ಸಚಿವ ಎಂ.ವಿ.ರಾಜಶೇಖರನ್, ಹನುಮಂತಪ್ಪ, ಪತ್ರಕರ್ತ ಬಿ.ರಾಮಯ್ಯ ಮತ್ತಿತರರು ಉಪಸ್ಥಿತರಿದ್ದರು.