
ಲಕ್ನೋ : 2017ರ ಆಗಸ್ಟ್ನಲ್ಲಿ ಉತ್ತರ ಪ್ರದೇಶದ ಗೋರಖ್ಪುರದ ಬಿಆರ್ಡಿ ಮೆಡಿಕಲ್ ಕಾಲೇಜಿನಲ್ಲಿ ಆಮ್ಲಜನಕ ಸಿಲಿಂಡರ್ಗಳಿಲ್ಲದ ಕಾರಣಕ್ಕೆ 63 ಶಿಶುಗಳು ಅಸುನೀಗಿದ ಪ್ರಕರಣದ ಓರ್ವ ಆರೋಪಿಯಾಗಿರುವ ಡಾ. ಕಫೀಲ್ ಖಾನ್ ಅವರ ಸಹೋದರ ಕಾಶೀಫ್ ಜಮೀಲ್ ಎಂಬವರ ಮೇಲೆ ಕೆಲವು ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವುದಾಗಿ ವರದಿಯಾಗಿದೆ.
ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ 34ರ ಹರೆಯದ ಕಾಶೀಫ್ ಜಮೀಲ್ ರನ್ನು ಒಡನೆಯೇ ಖಾಸಗಿ ಆಸ್ಪತ್ರೆಗೆ ಒಯ್ಯಲಾಗಿದ್ದು ಅವರ ಸ್ಥಿತಿ ಗಂಭೀರವಿದೆ ಎಂದು ತಿಳಿದು ಬಂದಿದೆ.
ನಿನ್ನೆ ಭಾನುವಾರ ರಾತ್ರಿ 11 ಗಂಟೆಯ ಸುಮಾರಿಗೆ ಜಮೀಲ್ ಅವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದರು. ಪರಿಣಾಮವಾಗಿ ಅವರ ಕೈ, ಕುತ್ತಿಗೆ ಮತ್ತು ಮುಖಕ್ಕೆ ತೀವ್ರ ಸ್ವರೂಪದ ಗಾಯಗಳಾದವು ಎಂದು ಕೋತ್ವಾಲಿ ಪೊಲೀಸ್ ಠಾಣೆಯ ಪ್ರಭಾರಾಧಿಕಾರಿ ಘನಶ್ಯಾಮ್ ತಿವಾರಿ ತಿಳಿಸಿದ್ದಾರೆ. ಈ ಗುಂಡಿನ ದಾಳಿಯ ಬಗ್ಗೆ ಈ ತನಕ ಯಾವುದೇ ದೂರು ದಾಖಲಾಗಿಲ್ಲ ಎಂದವರು ಹೇಳಿದರು.
ಆ್ಯಕ್ಟಿವಾ ಸ್ಕೂಟರ್ನಲ್ಲಿ ಬಂದಿದ್ದ ದುಷ್ಕರ್ಮಿಗಳು ಜಮೀಲ್ ಅವರ ಮೇಲೆ ಮೂರು ಸುತ್ತಿನ ಗುಂಡು ಹಾರಾಟ ನಡೆಸಿ ಕೂಡಲೇ ಸ್ಥಳದಿಂದ ಪರಾರಿಯಾದರು ಎಂದವರು ತಿಳಿಸಿದರು.
ಗೋರಖ್ಪುರ ಆಸ್ಪತ್ರೆಯಲ್ಲಿ ಆಮ್ಲಜನಕದ ಸಿಲಿಂಡರ್ಗಳು ಇಲ್ಲದ ಕಾರಣಕ್ಕೆ 63 ಶಿಶುಗಳ ಸಾವು ಸಂಭವಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದ ಎಂಟು ತಿಂಗಳ ತರುವಾಯ, ಈ ವರ್ಷ ಎಪ್ರಿಲ್ನಲ್ಲಿ ಜಮೀಲ್ ಅವರ ಸಹೋದರ ಡಾ. ಕಫೀಲ್ ಖಾನ್ ಅವರು ಅಲಹಾಬಾದ್ ಹೈಕೋರ್ಟಿನಿಂದ ಜಾಮೀನು ಪಡೆದು ಹೊರಬಂದಿದ್ದರು.