ಬೆಂಗಳೂರು, ಜೂ.9-ಭವಿಷ್ಯದ ದೃಷ್ಟಿಯಿಂದ ಬೆಂಗಳೂರಿನ ಅಭಿವೃದ್ಧಿಯನ್ನು ಯೋಚಿಸಬೇಕಿದೆ. ಬೆಳೆಯುತ್ತಿರುವ ನಗರಕ್ಕೆ ಕಾವೇರಿ ನೀರು ಪೂರೈಕೆಯಲ್ಲೂ ಮುಂದಾಲೋಚನೆ ಅತ್ಯಗತ್ಯವಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟರು.
ನಗರದ ಕಸಾಪದ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಭಾರತ ಜ್ಞಾನಾಭಿವೃದ್ಧಿ ಟ್ರಸ್ಟ್ ಮತ್ತು ಕೃಷಿಕ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಕರ್ನಾಟಕ ನಿರ್ಮಾಣದಲ್ಲಿ ಕೆಂಪೇಗೌಡ ರಾಜವಂಶಸ್ಥರ ಕೊಡುಗೆಗಳು ಕುರಿತ ವಿಚಾರ ಸಂಕಿರಣ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಬೆಂಗಳೂರು ನಗರದ ಸರ್ವಾಂಗೀಣ ಅಭಿವೃದ್ಧಿಗೆ ಮುಂದಾಲೋಚನೆಯಿಂದ ಮುನ್ನಡಿ ಇಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಭವಿಷ್ಯದ ದೃಷ್ಟಿಕೋನ ಸೇರಿದಂತೆ ಇನ್ನಿತರ ಎಲ್ಲ ಆಯಾಮಗಳಲ್ಲೂ ಚಿಂತಿಸಿ ಕ್ರಮಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ಕೆಂಪೇಗೌಡ ಬೆಂಗಳೂರು ಕಟ್ಟಿದ ಇತಿಹಾಸವನ್ನು ಕೇಳಿದ್ದೇವೆ. ಆದರೆ ವೈಭವೋಪೇತವಾದ ಕೆಂಪೇಗೌಡರ ಬೆಂಗಳೂರು ನಿರ್ಮಾಣದ ಇತಿಹಾಸದೊಂದಿಗೆ ಇರುವ ಕಷ್ಟ-ಸುಖಗಳನ್ನು ಅರಿಯಬೇಕಿದೆ. ಆಧುನಿಕ ಜಗತ್ತಿಗೂ ಇದರ ಪರಿಚಯವಾಗಬೇಕಿದೆ ಎಂದರು.
ಆಸ್ಟ್ರೇಲಿಯಾದಲ್ಲಿ ಅಡಿಲೇಡ್ ಆಧುನಿಕ ರೀತಿಯಲ್ಲಿ ನಿರ್ಮಾಣಗೊಂಡಿರುವ ನಗರ. ಅದೇ ರೀತಿ ಬೆಂಗಳೂರನ್ನು ಅಂದಿನ ಕಾಲದಲ್ಲೇ ಕೆಂಪೇಗೌಡರು ಎಲ್ಲಾ ಕಸುಬಿನವರಿಗೂ ವ್ಯವಸ್ಥಿತವಾಗಿ ಅವಕಾಶ ಕಲ್ಪಿಸಿ ನಿರ್ಮಾಣ ಮಾಡಿದ್ದರು. ಇದರೊಂದಿಗೆ ಅಗತ್ಯ ಮೂಲಭೂತ ಸೌಕರ್ಯಗಳಾದ ನೀರಿಗಾಗಿ ಕೆರೆಕಟ್ಟೆಗಳನ್ನು ನಿರ್ಮಿಸಿದ್ದರು. ನಗರದ ನಾಲ್ಕೂ ದಿಕ್ಕುಗಳಲ್ಲಿ ಗೋಪುರ ನಿರ್ಮಾಣ ಮಾಡಿ ಈ ಪರಿಧಿಯೊಳಗೆ ನಗರವಿರುವ ಆಶಯ ಹೊಂದಿದ್ದರು. ಆದರೆ ಇಂದು ಬೆಂಗಳೂರು ಈ ಸೀಮಿತ ಗಡಿಯನ್ನು ದಾಟಿ ತನ್ನ ಕಬಂಧ ಬಾಹುಗಳನ್ನು ಚಾಚಿ ಬೆಳೆದು ನಿಂತಿದೆ.
ಗೋಪುರಗಳ ಆಚೆಗೂ ಬಹಳಷ್ಟು ದೂರ ರಾಮನಗರ, ಕೋಲಾರ, ತುಮಕೂರು ಸೇರಿದಂತೆ ನೆರೆಹೊರೆ ಜಿಲ್ಲೆಗಳನ್ನು ನುಂಗಿ ಹಾಕುವ ಮಟ್ಟಕ್ಕೆ ಬೆಳೆದಿದೆ.
ಬೆಂಗಳೂರಿನಲ್ಲಿ ಎಲ್ಲಾ ರೀತಿಯ ಜನ ವಾಸಿಸುತ್ತಿದ್ದಾರೆ. 1.35 ಕೋಟಿ ಜನಸಂಖ್ಯೆ ಹೊಂದಿರುವ ಬೆಂಗಳೂರು ವಿಶ್ವದ ಗಮನ ಸೆಳೆದಿದೆ. ಕಾಕತಾಳೀಯ ಎಂಬಂತೆ ಅದೇ ಖಾತೆ ನನಗೆ ದೊರೆತಿದೆ. ಬೆಂಗಳೂರನ್ನು ಮತ್ತಷ್ಟು ಸುಧಾರಿತ ಮಟ್ಟಕ್ಕೆ ಕೊಂಡೊಯ್ಯಬೇಕಿದೆ, ಸಮಸ್ಯೆಗಳಿಗೆ ಸ್ಪಂದಿಸಿ ಭವಿಷ್ಯದ ದೃಷ್ಟಿಯಲ್ಲಿ ಬೆಂಗಳೂರನ್ನು ಪರಿಪೂರ್ಣವಾಗಿ ಅಭಿವೃದ್ದಿಗೊಳಿಸುವ ಸವಾಲು ತಮ್ಮ ಮುಂದಿದೆ ಎಂದರು.
ಚೆನ್ನೈನ ಹೈಕೋರ್ಟ್‍ನ ಹಿರಿಯ ನ್ಯಾ.ಹುಲುವಾಡಿ ಜಿ.ರಮೇಶ್ ಮಾತನಾಡಿ, ಬೆಂಗಳೂರಿನಲ್ಲಿ ಹೆಚ್ಚಿರುವ ಸಂಚಾರ ದಟ್ಟಣೆ ನಿವಾರಣೆಗೆ ಪ್ರಮುಖವಾಗಿ ಪರಿಹಾರ ಕಂಡುಕೊಳ್ಳಬೇಕಿದೆ. ಇದರೊಂದಿಗೆ ಬೆಂಗಳೂರಿನ ಇತರೆ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಹೆಚ್ಚಿನ ಕಾಳಜಿ ವಹಿಸಿ ನಗರವನ್ನು ಕಟ್ಟುವಂತೆ ಸಲಹೆ ಮಾಡಿದರು.
ಕಾರ್ಯಕ್ರಮದಲ್ಲಿ ಇತಿಹಾಸಕಾರ ಹಾಗೂ ಸಂಶೋಧಕ ಡಾ.ಎಂ.ಜಿ.ನಾಗರಾಜ್, ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಹಾಗೂ ಸಾಹಿತಿ ಎಲ್.ಎನ್.ಮುಕುಂದರಾಜ್, ರಾಷ್ಟ್ರಪ್ರಶಸ್ತಿ ಪುರಸ್ಕøತ ಶಿಕ್ಷಕ ಎನ್.ಸತ್ಯಪ್ರಕಾಶ್, ನಾಡಪ್ರಭು ರಾಜ್ಯ ಒಕ್ಕಲಿಗರ ಕೇಂದ್ರದ ಅಧ್ಯಕ್ಷ ನಾಡಪ್ರಭು ಲಕ್ಕೇಗೌಡ ಅವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಮರಿಮಲ್ಲಯ್ಯ ಎಂಬುವರು ಬಿಬಿಎಂಪಿಯನ್ನು ವಿಭಜನೆ ಮಾಡದಂತೆ ಮನವಿ ಸಲ್ಲಿಸಿದರು.
ರಾಜ್ಯ ಒಕ್ಕಲಿಗರ ಸಂಘದ ಪ್ರಧಾನಕಾರ್ಯದರ್ಶಿ ಪೆÇ್ರ.ಎಂ.ನಾಗರಾಜ್, ಯಲಹಂಕ ಸಂಸ್ಥಾನ ಶ್ರೀ ಕೆಂಪೇಗೌಡರ ರಾಜವಂಶ ಸಂಶೋಧನಾ ಮತ್ತು ಪ್ರಚಾರ ಪರಿಷತ್ ಅಧ್ಯಕ್ಷ ತಲಕಾಡು ಚಿಕ್ಕರಂಗೇಗೌಡ ಮತ್ತಿತರರು ಉಪಸ್ಥಿತರಿದ್ದರು.