ಪಣಜಿ, ಜೂ.9-ಗೋವಾದಾದ್ಯಂತ ಮೆದುಳು ಆಘಾತ ರೋಗಗಳು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಅಲ್ಲಿನ ಸರ್ಕಾರ ಆಸ್ಪತ್ರೆಗಳಲ್ಲಿ ನರರೋಗ ತಜ್ಞ ವಿಭಾಗವನ್ನು ಬಲವರ್ಧನೆಗೊಳಿಸಲು ತೀರ್ಮಾನಿಸಿದೆ. ಸರ್ಕಾರಿ ಒಡೆತನದ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ನರರೋಗ ತಜ್ಞ ವಿಭಾಗಕ್ಕೆ ಅತ್ಯಾಧುನಿಕ ಸಲಕರಣೆಗಳು ಹಾಗೂ ತಜ್ಞ ವೈದ್ಯರನ್ನು ನಿಯೋಜಿಸಲು ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಸಚಿವ ವಿಶ್ವಜಿತ್ ರಾಣೆ ತಿಳಿಸಿದ್ದಾರೆ.
ಮೆದುಳು ಆಘಾತಕ್ಕೆ ಸೂಕ್ತ ಚಿಕಿತ್ಸೆ ನೀಡುವ ಕುರಿತಂತೆ ತಜ್ಞ ವೈದ್ಯರುಗಳಿಗೆ ವಿದೇಶದಲ್ಲಿ ತರಬೇತಿ ಕೊಡಿಸಲು ತೀರ್ಮಾನಿಸಲಾಗಿದೆ ಎಂದು ಅವರು ವಿವರಿಸಿದರು.
ಇಂಧನ ಸಚಿವ ಪಾಂಡುರಂಗ ಮಡ್ಕೈಕರ್, ಶಾಸಕ ಕಾರ್ಲೋಸ್ ಅಲ್ಮೈಡಾ ಇತ್ತೀಚೆಗೆ ಬ್ರೈನ್ಸ್ಟ್ರೋಕ್ಗೆ ಒಳಗಾಗಿದ್ದರು. ಮೆದುಳು ಆಘಾತಕ್ಕೆ ಒಳಗಾಗಿರುವ ಮಡ್ಕೈಕರ್ ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಹಾಗೂ ಅಲ್ಮೈಡಾ ಅವರು ಕೇರಳದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇತ್ತೀಚೆಗೆ ಗೋವಾದಲ್ಲಿ ಮಿದುಳು ಆಘಾತ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಗೋವಾ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.