ಬೆಂಗಳೂರು, ಜೂ.9-ಸದ್ಯದಲ್ಲೇ ನಡೆಯಲಿರುವ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಪ್ರತಿಪಕ್ಷ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆಗೆ ಮಾಡುವತ್ತ ಕಾರ್ಯತಂತ್ರ ರೂಪಿಸಿದೆ.
ಶಿವಮೊಗ್ಗ , ಬಳ್ಳಾರಿ, ಮಂಡ್ಯ ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದರೆ ರಾಮನಗರ ಮತ್ತು ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಜರುಗಲಿದೆ.
ಯಾವುದೇ ಒಂದು ಕ್ಷೇತ್ರಕ್ಕೆ ಅಭ್ಯರ್ಥಿಯ ರಾಜೀನಾಮೆ ಇಲ್ಲವೆ ಹಠಾತ್ ನಿಧನದಿಂದ ತೆರವಾದ ಸ್ಥಾನಕ್ಕೆ 6 ತಿಂಗಳೊಳಗೆ ಚುನಾವಣೆ ನಡೆಸಬೇಕೆಂಬ ನಿಯಮವಿದೆ. ಹೀಗಾಗಿ ಈ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಬಿಜೆಪಿ ತೀವ್ರ ಕಸರತ್ತು ನಡೆಸಿದೆ.
ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಲೋಕಸಭಾ ಸದಸ್ಯರಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ(ಶಿವಮೊಗ್ಗ), ಶ್ರೀರಾಮುಲು(ಬಳ್ಳಾರಿ), ಸಿ.ಎಸ್.ಪುಟ್ಟರಾಜು(ಮಂಡ್ಯ) ಅವರುಗಳು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ವಿಜೇತರಾಗಿದ್ದರು.
ವಿಧಾನಸಭೆಗೆ ಆಯ್ಕೆಯಾದ ನಂತರ ಈ ಮೂವರು ತಮ್ಮ ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಮೂರು ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.
ಇನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಮನಗರ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಎರಡೂ ಕ್ಷೇತ್ರಗಳಿಂದ ವಿಜೇತರಾಗಿದ್ದರು.
ಈಗಾಗಲೇ ಅವರು ರಾಮನಗರ ಕ್ಷೇತ್ರಕ್ಕೆ ರಾಜೀನಾಮೆ ನೀಡಿ ಚನ್ನಪಟ್ಟಣವನ್ನು ಉಳಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಬಾಗಲಕೋಟೆ ಸಮೀಪ ಉಂಟಾದ ಅಪಘಾತದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ, ಶಾಸಕ ಸಿದ್ದು ನ್ಯಾಮೇಗೌಡ ನಿಧನರಾಗಿದ್ದರು.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಾಗಲಕೋಟೆ ಜಿಲ್ಲೆ ಜಮಖಂಡಿಯಿಂದ ಸಿದ್ದು ನ್ಯಾಮೇಗೌಡ ಗೆದ್ದಿದ್ದರು. ಹಾಗಾಗಿ ಈ ಎರಡೂ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಬೇಕಾಗಿದೆ.
ಅಭ್ಯರ್ಥಿಗಳು ಯಾರ್ಯಾರು:
ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಗೆಲ್ಲುವ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಲು ಪಕ್ಷದ ವಲಯದಲ್ಲಿ ಚಿಂತನೆ ನಡೆದಿದೆ.
ಮೂಲಗಳ ಪ್ರಕಾರ ಶಿವಮೊಗ್ಗ ಲೋಕಸಭೆಯಿಂದ ಯಡಿಯೂರಪ್ಪನವರ ಪುತ್ರರಾದ ಬಿ.ವೈ.ರಾಘವೇಂದ್ರ ಇಲ್ಲವೇ ಬಿ.ವೈ.ವಿಜಯೇಂದ್ರ ಅಭ್ಯರ್ಥಿಗಳಾಗುವ ಸಾಧ್ಯತೆ ಇದೆ. ಈಗಾಗಲೇ ರಾಘವೇಂದ್ರ ಒಂದು ಬಾರಿ ಸಂಸದರಾಗಿ ಇನ್ನೊಂದು ಬಾರಿ ಶಾಸಕರೂ ಆಗಿದ್ದರು.
ಇನ್ನು ವಿಜಯೇಂದ್ರ ಇತ್ತೀಚೆಗೆ ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಪುಕಾರು ಎದ್ದಿತ್ತು. ಕೊನೆಕ್ಷಣದಲ್ಲಿ ಅವರಿಗೆ ಟಿಕೆಟ್ ಕೈ ತಪ್ಪಿದ್ದು ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು.
ವಿಜಯೇಂದ್ರ ಮತ್ತು ರಾಘವೇಂದ್ರ ಶಿವಮೊಗ್ಗ ಜಿಲ್ಲೆಗೆ ಚಿರಪರಿಚಿತರಾಗಿರುವುದರಿಂದ ಇಬ್ಬರಲ್ಲಿ ಒಬ್ಬರನ್ನು ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆಸಿದೆ. ಇನ್ನು ಬಳ್ಳಾರಿಯಿಂದ ಶ್ರೀರಾಮುಲು ಅವರ ಸಹೋದರಿ ಜೆ.ಶಾಂತ, ಸೋದರಳಿಯ ಸುರೇಶ್‍ಬಾಬು, ಸಂಬಂಧ ಸಣ್ಣ ಫಕೀರಪ್ಪ ಹೆಸರುಗಳು ಕೇಳಿಬಂದಿವೆ.
ಈ ಹಿಂದೆ ಜೆ.ಶಾಂತ ಮತ್ತು ಸಣ್ಣ ಫಕೀರಪ್ಪ ಒಂದು ಬಾರಿ ಸಂಸದರಾದ ಅನುಭವವಿದೆ. ಸುರೇಶ್ ಬಾಬು ಕೂಡ ಎರಡು ಬಾರಿ ಶಾಸಕರಾಗಿದ್ದವರು. ಬಳ್ಳಾರಿಯಿಂದ ಯಾರನ್ನು ಕಣಕ್ಕಿಳಿಸಬೇಕು ಎಂಬುದರ ಬಗ್ಗೆ ಶ್ರೀರಾಮುಲು ನಿರ್ಧಾರವೇ ಅಂತಿಮವಾಗಲಿದೆ.
ಉಳಿದಂತೆ ರಾಮನಗರದಿಂದ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಹಾಗೂ ಜಮಖಂಡಿಯಿಂದ ಕಳೆದ ಚುನಾವಣೆಯಲ್ಲಿ ಕೆಲವೇ ಮತಗಳ ಅಂತರದಿಂದ ಪರಾಭವಗೊಂಡ ಮಾಜಿ ಶಾಸಕ ಶ್ರೀಕಾಂತ್ ಕುಲಕರ್ಣಿ ಬಹುತೇಕ ಅಭ್ಯರ್ಥಿಯಾಗುವುದು ಕಚಿತವಾಗಿದೆ.