ಮೊದಲು ಸಚಿವರಾಗಿರುವವರಿಗೆ ಎರಡು ವರ್ಷ ಅವದಿ;ü ನಂತರ ಸಚಿವರಾಗುವವರಿಗೆ ಮೂರು ವರ್ಷ ಅವಧಿ: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್

 

ಬೆಂಗಳೂರು, ಜೂ.9- ಮೊದಲು ಸಚಿವರಾಗಿರುವವರಿಗೆ ಎರಡು ವರ್ಷ ಅವಧಿ ಸಿಗಲಿದ್ದು, ನಂತರ ಸಂಪುಟ ಪುನಾರಚನೆಯಾಗಿ ಸಚಿವರಾಗುವವರಿಗೆ ಮೂರು ವರ್ಷ ಅವಧಿ ಸಿಗಲಿದೆ. ಬಾಕಿ ಇರುವ ಆರು ಸಚಿವ ಸ್ಥಾನಗಳಿಗೆ ಶೀಘ್ರವೇ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಬೆಂಗಳೂರಿನ ತಮ್ಮ ನಿವಾಸದಲ್ಲಿಂದು ಸಚಿವ ಆರ್.ವಿ.ದೇಶಪಾಂಡೆ ಹಾಗೂ ಇತರೆ ನಾಯಕರ ಜತೆ ಚರ್ಚೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೀಘ್ರವೇ ಸಂಪುಟ ವಿಸ್ತರಣೆಯಾಗಲಿದೆ. ಆ ವೇಳೆ ನನ್ನ ಬಳಿ ಇರುವ ಹೆಚ್ಚುವರಿ ಖಾತೆಗಳನ್ನು ನೂತನ ಸಚಿವರಿಗೆ ಬಿಟ್ಟುಕೊಡಲಾಗುವುದು. ಹಾಗಾಗಿ ಸ್ವಲ್ಪ ದಿನ ಆಕಾಂಕ್ಷಿಗಳು ತಾಳ್ಮೆಯಿಂದ ಇರಬೇಕೆಂದು ಮನವಿ ಮಾಡಿದರು.

ಎಂ.ಬಿ.ಪಾಟೀಲ್ ಹಾಗೂ ದಿನೇಶ್‍ಗುಂಡೂರಾವ್ ಅವರು ಯಾವ ಕಾರಣಕ್ಕಾಗಿ ದೆಹಲಿಗೆ ಹೋಗಿದ್ದಾರೆ ಎಂಬುದು ಗೊತ್ತಿಲ್ಲ. ಅವರಾಗಿಯೇ ದೆಹಲಿಗೆ ಹೋಗಿದ್ದಾರೋ ಅಥವಾ ಹೈಕಮಾಂಡ್ ಬುಲಾವ್ ನೀಡಿದೆಯೋ ಗೊತ್ತಿಲ್ಲ. ನಿನ್ನೆ ನಾನು ಎಂ.ಬಿ.ಪಾಟೀಲ್ ಹಾಗೂ ಇತರರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ. ಸಚಿವ ಸ್ಥಾನ ಆಕಾಂಕ್ಷಿಗಳ ಮನವೊಲಿಕೆಯ ಯತ್ನ ನಡೆಯುತ್ತಿದೆ ಎಂದರು.

ಒಂದು ಪಕ್ಷ ಅಧಿಕಾರದಲ್ಲಿದ್ದಾಗಲೇ ಈ ರೀತಿಯ ಬೆಳವಣಿಗೆಗಳು ಸಹಜ. ಇನ್ನು ಮೈತ್ರಿ ಸರ್ಕಾರದಲ್ಲಿ ಸರ್ವೆ ಸಾಮಾನ್ಯ. ಅವಕಾಶ ಸಿಗದೇ ಇದ್ದಾಗ ಅಸಮಾಧಾನ ವ್ಯಕ್ತಪಡಿಸುವುದನ್ನು ತಪ್ಪು ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.
ಶಿಡ್ಲಘಟ್ಟದ ಶಾಸಕ ವಿ.ಮುನಿಯಪ್ಪ ಅವರ ಪರವಾಗಿ ನಾನೇ ವಕಾಲತ್ತು ವಹಿಸುತ್ತೇನೆ. ಸ್ವಲ್ಪ ದಿನ ತಾಳ್ಮೆಯಿಂದ ಇದ್ದರೆ ಅವಕಾಶ ಸಿಗುತ್ತದೆ. ಶೀಘ್ರವೇ ದೆಹಲಿಗೆ ಹೋಗುತ್ತಿದ್ದು, ಅಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲಾಗುವುದು. ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ. ಯಾರು ಅಸಮಾಧಾನಗೊಳ್ಳುವ ಅಗತ್ಯವಿಲ್ಲ. ಮೊದಲ ಹಂತದ ಸಂಪುಟ ವಿಸ್ತರಣೆಯಲ್ಲಿ ಸಚಿವರಾಗಿರುವವರು ಎರಡು ವರ್ಷ ಕೆಲಸ ಮಾಡುತ್ತಾರೆ. ನಂತರ ಆರು ತಿಂಗಳಿಗೊಮ್ಮೆ ಸಚಿವರ ಮೌಲ್ಯಮಾಪನ ನಡೆಯುತ್ತದೆ ಎಂದು ತಿಳಿಸಿದರು.
ಮುಂದಿನ ಹಂತದ ಸಂಪುಟ ಪುನಾರಚನೆಯಲ್ಲಿ ಅವಕಾಶ ಸಿಕ್ಕವರು ಮೂರು ವರ್ಷ ಸಚಿವರಾಗಿರುತ್ತಾರೆ. ಹೀಗಾಗಿ ಯಾರೂ ಅಸಮಾಧಾನಗೊಳ್ಳುವ ಅಗತ್ಯವಿಲ್ಲ ಎಂದು ಪರಮೇಶ್ವರ್ ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವ ಆರ್.ವಿ.ದೇಶಪಾಂಡೆ, ಆಕಾಂಕ್ಷಿಗಳು ಹಲವಾರು ಮಂದಿ ಇದ್ದಾರೆ. ಸಚಿವ ಸ್ಥಾನಗಳು ಕಡಿಮೆ ಇವೆ. ಹೀಗಾಗಿ ಅಸಮಾಧಾನ ಸಹಜವಾಗಿರುತ್ತದೆ. ಚರ್ಚೆ ಮೂಲಕ ಬಗೆಹರಿಸಿಕೊಳ್ಳುತ್ತೇವೆ. ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿದ್ದರೆ ಸಂಪುಟ ವಿಸ್ತರಣೆಯಲ್ಲಿ ಎಲ್ಲರಿಗೂ ಅವಕಾಶ ಕೊಡಲು ಅವಕಾಶವಿತ್ತು. ಸಮ್ಮಿಶ್ರ ಸರ್ಕಾರವಾಗಿರುವುದರಿಂದ ಕಾಂಗ್ರೆಸ್ ಪಾಲಿಗೆ ಬಂದಿರುವುದು 22 ಸ್ಥಾನಗಳು ಮಾತ್ರ. ಅಷ್ಟರಲ್ಲೇ ಎಲ್ಲರನ್ನೂ ಸಮಾಧಾನಪಡಿಸಬೇಕಿದೆ ಎಂದರು.
ಹಂತ ಹಂತವಾಗಿ ಪಕ್ಷ ಎಲ್ಲರನ್ನೂ ಗುರುತಿಸುತ್ತದೆ. ಆ ವರೆಗೂ ತಾಳ್ಮೆಯಿಂದ ಇರುವಂತೆ ದೇಶಪಾಂಡೆ ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ