ಧಾರವಾಡ ಕೃಷಿ ವಿಶ್ವವಿದ್ಯಾಲಯದ ಮಹತ್ವದ ಸಾಧನೆ: 9 ಹೊಸ ಸುಧಾರಿತ ಬೀಜ ತಳಿಗಳ ಅಭಿವೃದ್ಧಿ

ಧಾರವಾಡ:ಜೂ-9: ದೇಶದ ಉತ್ಕೃಷ್ಟ ಕೃಷಿ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವ ಧಾರವಾಡ ಕೃಷಿ ವಿವಿ ಮತ್ತೆ ತನ್ನ ಸಂಶೋಧನಾ ಸಾಮರ್ಥ್ಯವನ್ನು ಇಡೀ ದೇಶಕ್ಕೆ ಸಾಬೀತು ಪಡಿಸಿದೆ.

ಬರೋಬ್ಬರಿ 9 ಹೊಸ ಸುಧಾರಿತ ಬೀಜ ತಳಿಗಳನ್ನು ಒಂದೇ ಸಮಯಕ್ಕೆ ಅಭಿವೃದ್ಧಿಗೊಳಿಸಿ ಸೈ ಎನಿಸಿಕೊಂಡಿದೆ.
ಮೂರೂವರೆ ದಶಕಗಳಿಂದಲೂ ಬೀಜೋತ್ಪಾದನೆಯಲ್ಲಿ ದೇಶದಲ್ಲಿಯೇ ಅಗ್ರ ಶ್ರೇಣಿಯಲ್ಲಿರುವ ಧಾರವಾಡ ಕೃಷಿ ವಿವಿ, ಕಳೆದ ವರ್ಷವಷ್ಟೇ ಇಟಲಿಯ ಆಲಿವ್‌ ಎಣ್ಣೆಗೆ ಸರಿಸಮನಾದ ಗುಣ ಹೊಂದಿದ ಶೇಂಗಾ ಬೀಜವನ್ನು(ಶೇಂಗಾ ಡಿಎಚ್‌-245)ಅಭಿವೃದ್ಧಿ ಪಡಿಸಿ ದೇಶದ ಕೃಷಿ ವಿಜ್ಞಾನಿಗಳ ಗಮನ ಸೆಳೆದಿತ್ತು. ಒಂದು ಕೆಜಿಗೆ 900 ರೂ. ಬೆಲೆ ಇರುವ ಆಲೀವ್‌ ಎಣ್ಣೆ ವಿದೇಶದಿಂದಲೇ ಹೆಚ್ಚು ಆಮದಾಗುತ್ತಿದೆ.

ಅಂತಹದೇ ಗುಣ ಇರುವ ಶೇಂಗಾ ಬೀಜ ಸಂಶೋಧನೆ ಮಾಡಿ ಅದರಿಂದ ಎಣ್ಣೆ (ಆಲಿಕ್‌ ಆಯಸಿಡ್‌ ಅಧಿಕ ಇರುವ)
ಉತ್ಪಾದನೆ ಮಾಡಿ ಮೌಲ್ಯವರ್ಧನೆಗೆ ಬಾಗಲಕೋಟೆ, ಧಾರವಾಡ ಕೃಷಿ ವಿಜ್ಞಾನ ಕೇಂದ್ರಕ್ಕೆ ಕೃಷಿ ವಿವಿ ಕೈ ಜೋಡಿಸಿದೆ.

ಇದರ ಯಶಸ್ಸಿನಿಂದ ಸ್ಫೂರ್ತಿ ಪಡೆದ ಕೃಷಿ ವಿವಿ ವಿಜ್ಞಾನಿಗಳು ಇದೀಗ ಒಂದೇ ಸಮಯಕ್ಕೆ ಗೋಧಿ,ಗೋವಿನಜೋಳ, ಸೋಯಾ ಅವರೆ, ಹೆಸರು,ಶೇಂಗಾ, ಎರಡು ಬಗೆಯ ಕಬ್ಬು, ಬದನೆಕಾಯಿ ಮತ್ತು ಬೆಳ್ಳುಳ್ಳಿಯ ವಿನೂತನ ತಳಿಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಅಭಿವೃದ್ಧಿಪಡಿಸಿದ ಎಲ್ಲ ತಳಿಗಳು ಕೂಡ ವಿನೂತನ ಕೃಷಿ ತಂತ್ರಜ್ಞಾನ, ರೋಗ ನಿರೋಧಕತೆ, ಬರಗಾಲ ನಿರೋಧಕತೆ, ಹೆಚ್ಚು ಇಳುವರಿ ನೀಡುವ ಗುಣ ಹೊಂದಿವೆ.

ಸಂಶೋಧನೆಯಾದ ಪ್ರತಿ ತಳಿಯನ್ನು ಸುಧಾರಿತ ಬೀಜ ರೂಪದಲ್ಲಿ ಸಿದ್ಧಪಡಿಸಲು 7 ವರ್ಷಕ್ಕೂ ಅಧಿಕ ಸಮಯ ತಗುಲಿದ್ದು, ಇದೀಗ ಅಂತಿಮವಾಗಿ ಅವುಗಳನ್ನು ಪರೀಕ್ಷೆಗೆ ಒಳಪಡಿಸಿ ಸಾಧಕ-ಬಾಧಕ ಪರಿಶೀಲನೆ ಮಾಡಿ ಅವುಗಳ ಬೀಜೋತ್ಪಾದನೆಗೆ ಕೃಷಿ ವಿವಿ ಅವಕಾಶ ನೀಡಿದೆ.

ಬೀಜೋತ್ಪಾದನೆ: ಮೇ 31ರಂದು ಧಾರವಾಡದ ಕೃಷಿ ವಿವಿಯಲ್ಲಿ ನಡೆದ ಸಂಶೋಧನಾ ಸಮ್ಮೇಳನದಲ್ಲಿ ಈ ತಳಿಗಳ ಬೀಜೋತ್ಪಾದನೆಗೆ ಅವಕಾಶ ನೀಡಲಾಗಿದ್ದು, ಇವುಗಳು ರೈತರ ಹೊಲಕ್ಕೆ ಸೇರಲು ಇನ್ನೂ 2 ವರ್ಷ ಬೇಕು. ಧಾರವಾಡ ಕೃಷಿ ವಿವಿ 1986ರಿಂದ ಈವರೆಗೂ 200ಕ್ಕೂ ಹೆಚ್ಚು ಸುಧಾರಿತ ತಳಿಗಳು ಮತ್ತು 1100ಕ್ಕೂ ಹೆಚ್ಚು ಕೃಷಿ ತಾಂತ್ರಿಕತೆಗಳ ಸಂಶೋಧನೆ ಮಾಡಿದೆ.

28 ತಂತ್ರಜ್ಞಾನ: ಕಳೆದ 4 ವರ್ಷಗಳಿಂದ ರೈತರಿಗೆ ಇನ್ನಷ್ಟು ಸರಳ ಮಾರ್ಗದ ಮೂಲಕ ಬೆಳೆ ಬೆಳೆಯಲು
ಸಹಕಾರಿಯಾಗುವ 28 ಸುಧಾರಿತ ಬೇಸಾಯ ಕ್ರಮಗಳನ್ನು ಕೂಡ ಕೃಷಿ ವಿವಿ ಸಂಶೋಧನೆ ಮಾಡಿದೆ. ಕಬ್ಬಿನ ಬೆಳೆಯಲ್ಲಿ ಕಳೆ ನಿರ್ವಹಣೆ,ತೊಗರಿ ಮತ್ತು ಹೆಸರಿನಲ್ಲಿ ಅಂತರ ಬೆಳೆ ಪದ್ಧತಿ, ಹಿಂಗಾರಿ ಬೀಜದಲ್ಲಿ ಬರ ನಿರೋಧಕತೆ ವೃದ್ಧಿಸುವ ವಿಧಾನಗಳು ವಿಶೇಷವಾಗಿವೆ. ಪುಂಡಿ ಮತ್ತು ಹತ್ತಿ ಬೀಜ ಮಿಶ್ರಣ ಮಾಡಿ ಕಾಗದ ಸಿದ್ಧಗೊಳಿಸುವ
ತಂತ್ರಜ್ಞಾನ ಪರಿಸರ ಸ್ನೇಹಿ ಮತ್ತು ಗಿಡಮರಗಳ ಸಂರಕ್ಷಣೆಗೆ ಇನ್ನಷ್ಟು ಒತ್ತು ನೀಡುವಂತಿದೆ. ಇನ್ನು ನಾಯಿ ಮೆಂತೆ (ಕ್ಯಾಸಿಯಾ ಟೋರಾ)ದಿಂದ ಬಟ್ಟೆಯ ಮೇಲೆ ಅಲಂಕಾರಿಕ ಮುದ್ರಣವನ್ನು ಮಾಡುವ ತಂತ್ರಜ್ಞಾನವನ್ನು ವಿವಿಯ ವಿಜ್ಞಾನಿಗಳು ಸಂಶೋಧಿಸಿದ್ದಾರೆ.

ಹೊಸ ತಳಿಗಳು ಯಾವವು?: ಗೋಧಿ-ಉಎಎಸ್‌-375 (ಡಾ.ರುದ್ರಾ ನಾಯ್ಕ ಮತ್ತು ಸಂಗಡಿಗರ ಸಂಶೋಧನೆ), ಗೋವಿನಜೋಳ-ಜಿಪಿಎಂಎಚ್‌ -1101 (ಡಾ.ಆರ್‌.ಎಂ. ಕಾಚಪುರ) ಹೆಸರು-ಡಿಜಿಜಿ-7 (ಡಾ.ವಿಜಯ ಕುಮಾರ್‌), ಶೇಂಗಾ-ಐಸಿಜಿವಿ06189(ಡಾ.ಎಚ್‌.ಎಲ್‌. ನದಾಫ್‌),ಸೋಯಾ ಅವರೆ- ಡಿಎಸ್‌ಬಿ-23 (ಡಾ.ಜಿ.ಟಿ.ಬಸವರಾಜ), ಕಬ್ಬು-ಎಸ್‌ಕೆ09227 (ಡಾ.ಎಸ್‌.ಬಿ.ಪಾಟೀಲ), ಕಬ್ಬು-ಎಸ್‌ಎನ್‌ಕೆ-09293 (ಡಾ.ಎಸ್‌.ಬಿ. ಪಾಟೀಲ)ಬದನೆಕಾಯಿ-ಡಿಡಬ್ಲೂಬಿ-1(ಡಾ.ಪಿ.ಆರ್‌. ಧರಮಟ್ಟಿ), ಬೆಳ್ಳುಳ್ಳಿ-ಡಿಡಬ್ಲೂಡಿಜಿ-2 (ಡಾ. ಪಿ.ಆರ್‌. ಧರಮಟ್ಟಿ) ನೂತನ ತಳಿಗಳಾಗಿವೆ. ಈ ಎಲ್ಲ ತಳಿಗಳಿಗೂ ದೇಶದ ಇತರೆಡೆಯಿಂದ ಬೇಡಿಕೆ ಬರುತ್ತಿದೆ.

ಬೀಜೋತ್ಪಾದನೆಯಲ್ಲಿ ಕುಸಿತ: ಒಂದು ದಶಕದಿಂದ ಎಲ್ಲಾ ಬಗೆಯ ಉತ್ಕೃಷ್ಟ ಬೀಜೋತ್ಪಾದನೆಯಲ್ಲಿ ನಂ.1 ಸ್ಥಾನದಲ್ಲಿದ್ದ ಕೃಷಿ ವಿವಿ ಕಳೆದ 3 ವರ್ಷ ಸತತ ಬರಗಾಲ ಮತ್ತು ಅಕಾಲಿಕ ಮಳೆಯಿಂದಾಗಿ ಶೇಂಗಾ ಮತ್ತು ಸೋಯಾ ಅವರೆ ಉತ್ಪಾದನೆ ಕುಸಿತಗೊಂಡು ಇದೀಗ ಬಿಜೋತ್ಪಾದನೆಯಲ್ಲಿ 2ನೇ ಸ್ಥಾನಕ್ಕೆ ಕುಸಿದಿದೆ. ರಾಜ್ಯ ಸರ್ಕಾರ ಬೀಜ ಖರೀದಿಯಲ್ಲಿ ಮಾಡುತ್ತಿರುವ ಎಡವಟ್ಟು ಕೂಡ ಇದಕ್ಕೆ ಕಾರಣವಾಗಿದೆ. ಆರಂಭದಲ್ಲಿ ಬೇಡಿಕೆ ಪಟ್ಟಿ ಸಲ್ಲಿಸುವ ಸರ್ಕಾರ ನಂತರ ಖರೀದಿಗೆ ಆಸಕ್ತಿ ತೋರಿಸುತ್ತಿಲ್ಲ. ಹೀಗಾಗಿ ಬೀಜೋತ್ಪಾದನೆಗಿಂತ ತಳಿ ಸುಧಾರಣೆ ಮತ್ತು ವಿನೂತನ ತಂತ್ರಜ್ಞಾನಕ್ಕೆ ಕೃಷಿ ವಿವಿ ಒತ್ತು ನೀಡುತ್ತಿದೆ.

ಕೃಷಿ ವಿಜ್ಞಾನಿಗಳು ಸತತ ಪರಿಶ್ರಮದಿಂದ ಒಟ್ಟಿಗೆ 9 ಹೊಸ ತಳಿಗಳ ಅಭಿವೃದಿಟಛಿ ಮಾಡಿದ್ದು ಹೆಮ್ಮೆ ಎನಿಸುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಸಂಶೋಧನೆಗಳಿಗೆ ಅಗತ್ಯ ವ್ಯವಸ್ಥೆ ಮಾಡುತ್ತೇನೆ.
– ಡಾ. ವಿ.ಐ. ಬೆಣಗಿ,
ಕುಲಪತಿ, ಕೃಷಿ ವಿವಿ, ಧಾರವಾಡ

ದೇಶದಲ್ಲಿಯೇ ಇಂದಿಗೂ ಸುಧಾರಿತ ತಳಿ ಉತ್ಪಾದನೆಗೆ ಧಾರವಾಡ ಕೃಷಿ ವಿವಿ ಮುಂಚೂಣಿಯಲ್ಲಿದೆ. ಇದೀಗ 9 ತಳಿ
ಹಾಗೂ 28 ಕೃಷಿ ತಂತ್ರಗಳನ್ನು ಸಂಶೋಧನೆ ಮಾಡಿದೆ. ಇದನ್ನು ರೈತರ ಮನೆಗೆ ತಲುಪಿಸುವ ಜವಾಬ್ದಾರಿಯನ್ನು ವಿಶ್ವ ವಿದ್ಯಾಲಯ ಹೊತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ