ನವದೆಹಲಿ,ಜೂ.8- ಖಾಸಗಿ ಶಾಲೆಗಳಲ್ಲಿ ಹೆಚ್ಚುತ್ತಿರುವ ಶುಲ್ಕವನ್ನು ನಿಯಂತ್ರಿಸಲು ಮುಂದಾಗಿರುವ ಕೇಂದ್ರ ಸರ್ಕಾರ ದೇಶಾದ್ಯಂತ ಏಕರೂಪದ ಶುಲ್ಕ ನಿಯಂತ್ರಣ ಕಾಯ್ದೆ ಜಾರಿಗೆ ತರಲು ಮುಂದಾಗಿದೆ.
ಎಲ್ಲವೂ ನಿರೀಕ್ಷೆಯಂತೆ ನಡೆದರೆ ಸಂಸತ್‍ನ ಉಭಯ ಸದನಗಳಾದ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಸೂದೆಯನ್ನು ಮಂಡಿಸಲು ಕೇಂದ್ರ ಸರ್ಕಾರ ಗಂಭೀರ ಚಿಂತನೆ ಮಾಡಿದೆ.
ಸ್ವಾಯತ್ತ ಹಣಕಾಸು ಸ್ವತಂತ್ರ ಶಾಲೆ ಸುಗ್ರೀವಾಜ್ಞೆ ಕಾಯ್ದೆ 2018ನ್ನು ಜಾರಿಗೆ ತರಲು ಈಗಾಗಲೇ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಕಾರ್ಯೋನ್ಮುಖವಾಗಿದ್ದು, ಕೆಲವು ನೀತಿ-ನಿಯಮಗಳನ್ನು ರೂಪಿಸಲು ಮುಂದಾಗಿದೆ.
ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಖಾಸಗಿ ಶಾಲೆಗಳಲ್ಲಿ ಮನಸೋಇಚ್ಚೆ ಶುಲ್ಕ ವಸೂಲಿಗೆ ಕಡಿವಾಣ ಹಾಕಲು ವಿಶೇಷ ಕಾಯ್ದೆಯನ್ನು ಜಾರಿ ಮಾಡಿದ್ದರು. ಇದು ಭಾರೀ ಯಶಸ್ಸು ತಂದುಕೊಟ್ಟಿತ್ತು. ಇದೇ ಮಾದರಿಯನ್ನು ದೇಶಾದ್ಯಂತ ಅನುಸರಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಹೊಸ ಕಾಯ್ದೆಯನ್ನು ಜಾರಿ ಮಾಡಿ ಶುಲ್ಕ ವಸೂಲಿಗೆ ಕಡಿವಾಣ ಹಾಕಲು ಚಿಂತಿಸಿದೆ.
ಕಾಯ್ದೆಯಲ್ಲಿ ಏನೇನಿದೆ:
ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಈ ಕಾಯ್ದೆಯಿಂದ ಖಾಸಗಿ ಶಾಲೆಗಳ ಹಣದ ದಾಹಕ್ಕೆ ಕಡಿವಾಣ ಬೀಳಲಿದೆ. ವರ್ಷಕ್ಕೆ ಯಾವುದೇ ಶಾಲೆಗಳು ವಾರ್ಷಿಕ ಶುಲ್ಕವನ್ನು 20 ಸಾವಿರಕ್ಕಿಂತ ಹೆಚ್ಚಳ ಮಾಡುವಂತಿಲ್ಲ. ಪ್ರತಿಯೊಂದು ಶಾಲೆಗಳು ಶುಲ್ಕ ನಿಗದಿ ಮಾಡುವ ಸಂಬಂಧ ಕಡ್ಡಾಯವಾಗಿ ಪೆÇೀಷಕರು, ಶಿಕ್ಷಕರು, ಶಿಕ್ಷಣ ತಜ್ಞರನ್ನೊಳಗೊಂಡ ನಿಯಂತ್ರಣ ಸಮಿತಿಯೊಂದನ್ನು ರಚಿಸಬೇಕು.
60 ದಿನಕ್ಕೂ ಮೊದಲು ಅಂದರೆ ಎರಡು ತಿಂಗಳು ಮುಂಚಿತವಾಗಿಯೇ ಶೈಕ್ಷಣಿಕ ವರ್ಷದ ವಾರ್ಷಿಕ ಶುಲ್ಕ , ಸಮವಸ್ತ್ರ, ಪುಸ್ತಕ, ಬ್ಯಾಗ್, ಶೂ ಸೇರಿದಂತೆ ಇತ್ಯಾದಿಗಳ ಸಂಪೂರ್ಣ ಮಾಹಿತಿಯನ್ನು ಪೆÇೀಷಕರಿಗೆ ನೀಡಬೇಕು. ಸಮಿತಿ ಸದಸ್ಯರ ಒಪ್ಪಿಗೆ ಇಲ್ಲದೆ ಶಾಲೆಗಳು ವಾರ್ಷಿಕವಾಗಿ ಶುಲ್ಕವನ್ನು ಶೇ.8ಕ್ಕಿಂತ ಹೆಚ್ಚಿಸುವಂತಿಲ್ಲ. ಅಲ್ಲದೆ ಪ್ರತಿ ವರ್ಷ ಶಾಲೆಗಳು ವಾರ್ಷಿಕ ಶುಲ್ಕವನ್ನು ಹೆಚ್ಚಳ ಮಾಡುವಂತಿಲ್ಲ. ಒಂದು ಬಾರಿ ವಾರ್ಷಿಕ ಶುಲ್ಕವನ್ನು ಹೆಚ್ಚಳ ಮಾಡಿದರೆ ವಿದ್ಯಾರ್ಥಿಯು 10ನೇ ತರಗತಿ ಮುಗಿಯುವವರೆಗೂ ಅದನ್ನು ಬದಲಾವಣೆ ಮಾಡಲು ಅವಕಾಶವಿರುವುದಿಲ್ಲ. ಒಂದು ವೇಳೆ ಕಾಯ್ದೆ ಉಲ್ಲಂಘಿಸಿ ಶುಲ್ಕ ಹೆಚ್ಚಳ ಮಾಡಿದರೆ ಅಂಥ ಶಾಲೆಗಳಿಗೆ ಒಂದು ಲಕ್ಷದಿಂದ 5 ಲಕ್ಷದವರೆಗೆ ದಂಡ ವಿಧಿಸಬಹುದಾಗಿದೆ. ಪದೇ ಪದೇ ನಿಯಮ ಉಲ್ಲಂಘನೆ ಮಾಡುವ ಶಾಲೆಗಳ ಮಾನ್ಯತೆಯನ್ನೂ ರದ್ದು ಮಾಡಬಹುದು.
ಸಂಸತ್‍ನ ಉಭಯ ಸದನಗಳಲ್ಲಿ ಈ ಕಾಯ್ದೆ ಅಂಗೀಕಾರವಾದರೆ ರಾಷ್ಟ್ರಪತಿಯವರ ಅಂಕಿತಕ್ಕೆ ಕಳುಹಿಸಿಕೊಟ್ಟು ಮುಂಬರುವ ಅಂದರೆ 2019-2020 ಶೈಕ್ಷಣಿಕ ವರ್ಷಕ್ಕೆ ಇದು ದೇಶಾದ್ಯಂತ ಅನ್ವಯವಾಗಲಿದೆ.
ಕಾರಣವೇನು: ಇತ್ತೀಚೆಗೆ ಖಾಸಗಿ ಶಾಲೆಗಳು ಮನಸೋ ಇಚ್ಚೆ ಶುಲ್ಕವನ್ನು ಪೆÇೀಷಕರಿಂದ ವಸೂಲಿ ಮಾಡುತ್ತಿದ್ದರು. ಈ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದವು. ಕಳೆದ ಏಪ್ರಿಲ್‍ನಲ್ಲಿ ಉತ್ತರ ಪ್ರದೇಶದಲ್ಲಿ ಶುಲ್ಕಗಳ ನಿಯಂತ್ರಣಕ್ಕಾಗಿಯೆ ಕಾಯ್ದೆಯೊಂದನ್ನು ಜಾರಿ ಮಾಡಿದ್ದು ದೇಶಾದ್ಯಂತ ಸುದ್ದಿಯಾಗಿತ್ತು.
ಖಾಸಗಿ ಶಾಲೆಗಳ ತೀವ್ರ ವಿರೋಧದ ನಡುವೆಯೂ ಯಾವುದಕ್ಕೂ ಜಗ್ಗದ ಯೋಗಿ ಆದಿತ್ಯನಾಥ್ ಸರ್ಕಾರ, ಮಸೂದೆಯನ್ನು ಅಂಗೀಕರಿಸಿದೆ. ಈಗಾಗಲೇ ಗುಜರಾತ್, ಮಹಾರಾಷ್ಟ್ರದಲ್ಲೂ ಕೂಡ ಶುಲ್ಕ ನಿಯಂತ್ರಣ ಕಾಯ್ದೆ ಜಾರಿಯಲ್ಲಿದ್ದು , ಸರ್ಕಾರ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚು ಹಣ ವಸೂಲಿ ಮಾಡಿದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ. ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್, ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತುಕತೆ ನಡೆಸಿದ್ದು , ಕಾಯ್ದೆಗೆ ಅಂತಿಮ ಸ್ಪರ್ಶ ನೀಡುವತ್ತ ಮಗ್ನರಾಗಿದ್ದಾರೆ.