ಬೆಂಗಳೂರು, ಜೂ.8- ನಾಡೋಜ ಡಾ.ಬರಗೂರು ಪ್ರತಿಷ್ಠಾನದ ವತಿಯಿಂದ ಜೂ 10ರಂದು ಬೆಳಿಗ್ಗೆ 10.30ಕ್ಕೆ ಕನ್ನಡ ಸಾಹಿತ್ಯ ಪರಿಷತ್‍ನ ಅಕ್ಕಮಹಾದೇವಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ನಾಡೋಜ ಡಾ. ಬರಗೂರು ಪ್ರತಿಷ್ಠಾನದಿಂದ ಪ್ರತಿವರ್ಷ ಸಾಹಿತ್ಯ ಹಾಗೂ ಸಿನಿಮಾ ಕ್ಷೇತ್ರದ ತಲಾ ಒಬ್ಬರಿಗೆ 25 ಸಾವಿರ ರೂ ಮೊತ್ತದ ಬರಗೂರು ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಈ ವರ್ಷದಿಂದ ಆಯಾ ವರ್ಷದ ಒಂದು ಉತ್ತಮ ಕಾದಂಬರಿ ಮತ್ತು ವಿಚಾರ-ವಿಮರ್ಶೆ ಕೃತಿಯ ಸಾಹಿತಿಗಳಿಗೆ ತಲಾ 10ಸಾವಿರ ರೂ ಮೊತ್ತದ ಶ್ರೀಮತಿ ರಾಜಲಕ್ಷ್ಮೀ ಬರಗೂರು ಪುಸ್ತಕ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಈ ಬಾರಿ ಎಸ್.ಕೆ. ಭಗವಾನ್ (ಸಿನಿಮಾ) ಡಾ.ಬಿ.ಎಲ್. ವೇಣು (ಸಾಹಿತ್ಯ) ಅವರಿಗೆ ಬರಗೂರು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಡಾ. ಜಿ ರಾಮಕೃಷ್ಣ (ವಿಚಾರ -ವಿಮರ್ಶೆ) ರೇಖಾ ಕಾಖಂಡಕಿ(ಕಾದಂಬರಿ) ಅವರಿಗೆ ರಾಜಲಕ್ಷ್ಮೀ ಬರಗೂರು ಪುಸ್ತಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಹಿರಿಯ ನಟಿ ಪದ್ಮಭೂಷಣ ಡಾ.ಬಿ.ಸರೋಜಾದೇವಿ ಹಾಗೂ ಖ್ಯಾತ ಸಂಗೀತ ನಿರ್ದೇಶಕ ಡಾ.ಹಂಸಲೇಖ ಅವರು ಪ್ರಶಸ್ತಿ ಪ್ರದಾನ ಮಾಡುವರು, ಹಿರಿಯ ಲೇಖಕ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಅಧ್ಯಕ್ಷತೆ ವಹಿಸುವರು.
ಸಮಾರಂಭದ ವೇಳೆ ರಾಜಲಕ್ಷ್ಮೀ ಬರಗೂರು ಅವರ ಕುರಿತು ಮೈಸೂರಿನ ಡಾ. ರಾಜ್‍ಕುಮಾರ ಫಿಲ್ಮ್ ಇನ್ಸ್‍ಟಿಟ್ಯೂಟ್ ನಿರ್ಮಿಸಿ, ನಟ್ರಾಜ್ ಶಿವು ನಿರ್ದೇಶಿಸಿರುವ ಅನ್ನ ನೀಡಿದ ಅಮ್ಮ ಎಂಬ ಸಾಕ್ಷ್ಯ ಚಿತ್ರದ ಡಿವಿಡಿ ಬಿಡುಗಡೆ ಮಾಡಲಾಗುತ್ತದೆ.