ಬೆಂಗಳೂರು, ಜೂ.8-ನನಗೆ ನಿಮ್ಮ ಯಾವುದೇ ಸಲಹೆ ಬೇಕಿಲ್ಲ. ಮಂತ್ರಿ ಪದವಿ ಬೇಕು ಅಷ್ಟೇ ಎಂದು ಎಂ.ಬಿ.ಪಾಟೀಲ್ ಸಂಧಾನಕ್ಕೆ ಬಂದವರಿಗೆ ಖಡಕ್ಕಾಗಿ ಹೇಳಿದ್ದಾರೆ.
ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಬಂಡಾಯವೆದ್ದಿರುವ ಎಂ.ಬಿ.ಪಾಟೀಲ್ ಅವರ ಮನವೊಲಿಕೆ ಇಂದು ಅವರ ನಿವಾಸಕ್ಕೆ ತೆರಳಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಕೆ.ಜೆ.ಜಾರ್ಜ್, ಆರ್.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್ ಅವರ ವಿರುದ್ದ ಹರಿಹಾಯ್ದ ಎಂ.ಬಿ.ಪಾಟೀಲ್ ಅವರು ಚುನಾವಣೆಗೆ ಫಂಡ್ ಬೇಕಾದಾಗ ಎಂ.ಬಿ.ಪಾಟೀಲ್ ಬೇಕು, ಈಗ ನನ್ನ ನೆನಪಿಲ್ಲವೇ? ನಿನ್ನ ಸಲಹೆಗಳ ಅಗತ್ಯ ನನಗಿಲ್ಲ. ನಾನು ಸಚಿವನಾಗಬೇಕು ಅಷ್ಟೇ. ನಿಮ್ಮ ಯಾವ ಮಾತನ್ನೂ ಕೇಳುವ ವ್ಯವಧಾನ ನನಗಿಲ್ಲ ಎಂದು ಹೇಳಿದ್ದಾರೆ.
ಪರಮೇಶ್ವರ್, ಆರ್.ವಿ.ದೇಶಪಾಂಡೆ ಅವರು ಮನವೊಲಿಸುವ ಪ್ರಯತ್ನ ನಡೆಸಿದರಾದರೂ ಎಲ್ಲರ ವಿರುದ್ಧವೂ ಹರಿಹಾಯ್ದಿದ್ದಾರೆ. ನಾನು ಮಾಡಿದ ತಪ್ಪಾದರೂ ಏನು, ನನ್ನನ್ನು ಸಂಪುಟದಿಂದ ಹೊರಗಿಟ್ಟ ಕಾರಣವೇನು? ಕಾಂಗ್ರೆಸ್ ಪಕ್ಷಕ್ಕೆ ಏನು ಅನ್ಯಾಯ ಮಾಡಿದ್ದೆ? ನಾನು ನನ್ನ ಮತದಾರರಿಗೆ, ಕ್ಷೇತ್ರದ ಜನರಿಗೆ ಏನು ಹೇಳಲಿ ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ ಎನ್ನಲಾಗಿದೆ.
ನೀವು ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಿ. ಲೋಕಸಭೆ ಚುನಾವಣೆ ಹೆಚ್ಚಿನ ಸ್ಥಾನ ಗೆಲ್ಲಿಸಿಕೊಡಿ. ಮೂರನೇ ಹಂತದಲ್ಲಿ ನಿಮಗೆ ಸಚಿವರನ್ನಾಗಿ ಮಾಡುತ್ತೇವೆ ಎಂದು ಪರಮೇಶ್ವರ್ ಹೇಳಿದ್ದಾರೆ ಎನ್ನಲಾಗಿದ್ದು, ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಎಂ.ಬಿ.ಪಾಟೀಲ್ ಅವರು ಇದ್ಯಾವುದೂ ಬೇಕಾಗಿಲ್ಲ, ನಾನು ಶಾಸಕನಾಗಿಯೇ ಮುಂದುವರೆಯುತ್ತೇನೆ. ಕಳೆದ ಬಾರಿ ಐದು ವರ್ಷ ಮಂತ್ರಿ ಪದವಿಯಲ್ಲಿದ್ದಿರಿ. ನಾವೇ ನಿಮಗೆ ಬೆಂಬಲ ನೀಡಿದ್ದೆವು. ಈ ಬಾರಿ ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಪರಮೇಶ್ವರ್ ಮಾಡಿದ ಮನವಿಯನ್ನು ಎಂ.ಬಿ.ಪಾಟೀಲ್ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ.
ಎಂ.ಬಿ.ಪಾಟೀಲ್ ಅವರ ಈ ವರ್ತನೆಗೆ ಸಂಧಾನಕ್ಕೆ ಬಂದವರು ಕಂಗಾಲಾಗಿದ್ದಾರೆ ಎಂದು ತಿಳಿದುಬಂದಿದೆ.