ಬೆಂಗಳೂರು, ಜೂ.8- ಸಮ್ಮಿಶ್ರ ಸರ್ಕಾರದ ಸುಭದ್ರತೆಗಾಗಿ ಎಂ.ಬಿ.ಪಾಟೀಲ್ ಮತ್ತು ಅವರ ಸ್ನೇಹಿತರ ಅಸಮಾಧಾನಗಳನ್ನು ಕಾಂಗ್ರೆಸ್ನ ಹೈಕಮಾಂಡ್ ನಾಯಕರ ಗಮನಕ್ಕೆ ತರುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಇಂದು ಎಂ.ಬಿ.ಪಾಟೀಲ್ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬೆಳವಣಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ವಿಚಾರ. ಇದರಲ್ಲಿ ನಾನು ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ. ಏನೇ ನಿರ್ಧಾರ ತೆಗೆದುಕೊಂಡರೂ ಕಾಂಗ್ರೆಸ್ ನಾಯಕರೇ ತೆಗೆದುಕೊಳ್ಳಬೇಕು ಎಂದರು.
ಸಮ್ಮಿಶ್ರ ಸರ್ಕಾರ ಐದು ವರ್ಷ ಸುಭದ್ರವಾಗಿರಬೇಕು. ಆ ನಿಟ್ಟಿನಲ್ಲಿ ನಾನು ಎಂ.ಬಿ.ಪಾಟೀಲ್ ಅವರ ಜತೆ ಚರ್ಚೆ ನಡೆಸಿದ್ದೇನೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ಕಷ್ಟದಲ್ಲಿದ್ದಾಗ ನಾನು ಕಷ್ಟಪಟ್ಟು ದುಡಿದು ಸಂಘಟನೆ ಮಾಡಿದ್ದೇನೆ. ನಿಷ್ಟಾವಂತನಾಗಿ ಕೆಲಸ ಮಾಡಿದ್ದೇನೆ. ಆದರೆ, ನನ್ನನ್ನು ಈ ರೀತಿ ಏಕೆ ಮೂಲೆಗುಂಪು ಮಾಡಿದರು ಎಂಬ ನೋವನ್ನು ಎಂ.ಬಿ.ಪಾಟೀಲ್ ತೋಡಿಕೊಂಡಿದ್ದಾರೆ. ಈ ವಿಷಯದಲ್ಲಿ ನಾನು ಏನನ್ನೂ ಮಾಡಲು ಸಾಧ್ಯವಿಲ್ಲ. ಆದರೆ, ನನಗೆ ತಿಳಿದ ಮಾಹಿತಿಯನ್ನು ಹೈಕಮಾಂಡ್ ಗಮನಕ್ಕೆ ತರುತ್ತೇನೆ ಎಂದು ಸಿಎಂ ಹೇಳಿದರು.
ಎಂ.ಬಿ.ಪಾಟೀಲ್ ಅವರ ಜತೆ ಸುಮಾರು 15ರಿಂದ 20 ಮಂದಿ ಶಾಸಕರಿರುವುದರಿಂದ ಎಲ್ಲರ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗಿರುವುದರಿಂದ ಮುಂದಿನ ಬೆಳವಣಿಗೆಗಳನ್ನು ಕಾದು ನೋಡಬೇಕಿದೆ ಎಂದರು.