ಬೆಂಗಳೂರು, ಜೂ.8- ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ನೂತನ ಸಚಿವರಿಗೆ ಖಾತೆ ಹಂಚಿಕೆ ಇಂದು ಸಂಜೆ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಗಳಿವೆ.
ಜೆಡಿಎಸ್‍ಗೆ ಹಂಚಿಕೆಯಾಗಿದ್ದ ಇಂಧನ ಖಾತೆ ಕಾಂಗ್ರೆಸ್‍ಗೆ ಬಿಟ್ಟುಕೊಡುವ ಪ್ರಸ್ತಾಪವಾಗುತ್ತಿದ್ದು, ಅಧಿಕೃತವಾಗಿ ಯಾವುದೇ ಸ್ಪಷ್ಟ ನಿರ್ಧಾರ ಹೊರ ಬಿದ್ದಿಲ್ಲ.
ಉಭಯ ಪಕ್ಷಗಳಿಂದ 25 ಮಂದಿ ಶಾಸಕರು ಬುಧವಾರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಎರಡು ದಿನ ಕಳೆದರೂ ಹೊಸ ಸಚಿವರಿಗೆ ಖಾತೆ ಹಂಚಿಕೆಯಾಗಿಲ್ಲ.
ಖಾತೆ ಹಂಚಿಕೆ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಸಮಾಲೋಚನೆ ನಡೆಸಿ ಇಂದು ಸಂಜೆ ವೇಳೆಗೆ ಖಾತೆ ಹಂಚಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಜೆಡಿಎಸ್‍ನ 10 ಮಂದಿ ಸಚಿವರಿಗೆ ಖಾತೆ ಹಂಚಿಕೆ ಮಾಡುವ ಬಗ್ಗೆ ಕುಮಾರಸ್ವಾಮಿ ಅವರು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೊಂದಿಗೆ ಸಮಾಲೋಚನೆ ನಡೆಸಿದ ನಂತರ ಖಾತೆ ಹಂಚಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಈಗಾಗಲೇ ನೂತನ ಸಚಿವರಿಗೆ ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದ್ದು, ಕೆಲ ಸಚಿವರು ತಮ್ಮ ತಮ್ಮ ಕಚೇರಿಗಳಿಗೆ ಪೂಜೆ ಮಾಡಿ ಅಧಿಕೃತವಾಗಿ ಕಾರ್ಯಾರಂಭ ಮಾಡಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹಣಕಾಸು, ವಾರ್ತಾ ಇಲಾಖೆ, ಗುಪ್ತಚರ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯನ್ನು ತಮ್ಮ ಬಳಿಯೇ ಇಟ್ಟುಕೊಳ್ಳಲಿದ್ದಾರೆ.
ಅಲ್ಲದೆ, ಇನ್ನೂ ಏಳು ಸಚಿವ ಸ್ಥಾನ ಭರ್ತಿ ಮಾಡಬೇಕಾಗಿರುವುದರಿಂದ ಹಂಚಿಕೆಯಾಗದೆ ಉಳಿದಿರುವ ಕೆಲವು ಇಲಾಖೆಗಳನ್ನು ತಮ್ಮ ಬಳಿಯೇ ಇಟ್ಟುಕೊಳ್ಳುವುದರ ಜತೆಗೆ ಹಿರಿಯ ಸಚಿವರಿಗೂ ನೀಡುವ ಸಾಧ್ಯತೆಗಳಿವೆ.
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ಗೃಹ ಹಾಗೂ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಅಸಮಾಧಾನವಿಲ್ಲ:
ನಮ್ಮಲ್ಲಿ ಯಾವುದೇ ಅಸಮಾಧಾನವಿಲ್ಲ. ಸರ್ಕಾರದ ಮುಂದಿರುವ ಎಲ್ಲಾ ಸಮಸ್ಯೆಗಳು ಬಗೆಹರಿದಿವೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಪದ್ಮನಾಭನಗರದ ದೇವೇಗೌಡರ ನಿವಾಸದಲ್ಲಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ದೇವೇಗೌಡರ ಅನುಭವ ಹಾಗೂ ಮಾರ್ಗದರ್ಶನ ಪಡೆಯಲು ಅವರೊಂದಿಗೆ ಮಾತುಕತೆ ನಡೆಸಿದೆ. ನಮ್ಮಲ್ಲಿ ಯಾವುದೇ ಅಸಮಾಧಾನವಿಲ್ಲ. ಸಚಿವರು, ಶಾಸಕರು ವರಿಷ್ಠರನ್ನು ಭೇಟಿ ಮಾಡುತ್ತಿದ್ದಾರೆ ಅಷ್ಟೇ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಾಂಗ್ರೆಸ್‍ನಲ್ಲಿ ಸಣ್ಣಪುಟ್ಟ ಅಸಮಾಧಾನವಿದೆ ಎಂದು ಮತ್ತೊಂದು ಪ್ರಶ್ನೆಗೆ ಚುಟುಕಾಗಿ ಉತ್ತರಿಸಿದರು.
ಸಂಭಾವ್ಯ ಖಾತೆ ಹಂಚಿಕೆ ಈ ಕೆಳಕಂಡಂತಿವೆ.
ಆರ್.ವಿ.ದೇಶಪಾಂಡೆ- ಗ್ರಾಮೀಣಾಭಿವೃದ್ಧಿ
ಡಿ.ಕೆ.ಶಿವಕುಮಾರ್- ಇಂಧನ
ಕೆ.ಜೆ.ಜಾರ್ಜ್- ಭಾರೀ ಕೈಗಾರಿಕೆ
ಕೃಷ್ಣಬೈರೇಗೌಡ- ಸಂಸದೀಯ ವ್ಯವಹಾರಗಳು
ಎನ್.ಎಚ್.ಶಿವಶಂಕರರೆಡ್ಡಿ- ಕೃಷಿ
ರಮೇಶ್‍ಜಾರಕಿಹೊಳಿ- ಸಮಾಜಕಲ್ಯಾಣ
ಪ್ರಿಯಾಂಕ್ ಖರ್ಗೆ-ಐಟಿಬಿಟಿ
ಯು.ಟಿ.ಖಾದರ್- ನಗರಾಭಿವೃದ್ಧಿ
ಜಮೀರ್ ಅಹಮ್ಮದ್‍ಖಾನ್- ವಸತಿ, ಅಲ್ಪಸಂಖ್ಯಾತರ ಕಲ್ಯಾಣ
ಶಿವಾನಂದ ಪಾಟೀಲ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ವೆಂಕಟರಮಣಪ್ಪ- ಮೀನುಗಾರಿಕೆ
ರಾಜಶೇಖರಪಾಟೀಲ್- ಅರಣ್ಯ
ಸಿ.ಪುಟ್ಟರಂಗಶೆಟ್ಟಿ- ಕಾರ್ಮಿಕ
ಆರ್.ಶಂಕರ್- ಯುವಜನ ಸೇವೆ ಮತ್ತು ಕ್ರೀಡೆ
ಡಾ.ಜಯಮಾಲಾ- ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಎಚ್.ಡಿ.ರೇವಣ್ಣ- ಲೋಕೋಪಯೋಗಿ
ಬಂಡಪ್ಪಕಾಶಂಪುರ್- ಸಹಕಾರಿ
ಜಿ.ಟಿ.ದೇವೇಗೌಡ- ಕಂದಾಯ
ಡಿ.ಸಿ.ತಮ್ಮಣ್ಣ- ಉನ್ನತ ಶಿಕ್ಷಣ
ಎಂ.ಸಿ.ಮನಗೂಳಿ- ಸಣ್ಣಕೈಗಾರಿಕೆ
ಎಸ್.ಆರ್.ಶ್ರೀನಿವಾಸ್- ತೋಟಗಾರಿಕೆ
ವೆಂಕಟರಾವ್‍ನಾಡಗೌಡ- ಸಣ್ಣ ನೀರಾವರಿ
ಸಿ.ಎಸ್.ಪುಟ್ಟರಾಜು- ಸಾರಿಗೆ
ಸಾ.ರಾ.ಮಹೇಶ್- ಅಬಕಾರಿ
ಎನ್.ಮಹೇಶ್- ಪ್ರವಾಸೋದ್ಯಮ
ಕೊನೆ ಗಳಿಗೆಯಲ್ಲಿ ಈ ಖಾತೆಗಳಲ್ಲೂ ಬದಲಾವಣೆಯಾಗುವುದನ್ನು ಅಲ್ಲಗಳೆಯಲಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.