ಬೆಂಗಳೂರು, ಜೂ.8-ಕಳೆದ ಎರಡು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವ ಶಾಸಕರಾಗಿ, ಪಕ್ಷದ ಕಾರ್ಯಾಧ್ಯಕ್ಷರಾಗಿ, ಸಚಿವರಾಗಿ ಪ್ರಾಮಾಣಿಕ ಹಾಗೂ ದಕ್ಷತೆಯಿಂದ ಕಾರ್ಯನಿರ್ವಹಿಸಿದ ದಿನೇಶ್ಗುಂಡೂರಾವ್ ಅವರಿಗೆ ಮಂತ್ರಿ ಪದವಿ ನೀಡಬೇಕೆಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಒತ್ತಾಯಿಸಿದೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಆರ್.ಪ್ರಕಾಶ್ ಮತ್ತು ಕಾರ್ಯಕಾರಿಣಿ ಸದಸ್ಯರಾದ ಮುರಳೀಧರ್, ಜಯಸಿಂಹ, ರಮೇಶ್ರಾವ್, ರಮೇಶ್ ಅವರು, ದಿನೇಶ್ಗುಂಡೂರಾವ್ ಅವರು ಕಾಂಗ್ರೆಸ್ ಪಕ್ಷದಲ್ಲಿ ತಾವು ವಹಿಸಿಕೊಂಡ ಎಲ್ಲಾ ರೀತಿಯ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಎಲ್ಲ ವರ್ಗದ ಜಾತಿ, ಜನಾಂಗದವರೊಂದಿಗೆ ವಿಶ್ವಾಸವಿರಿಸಿಕೊಂಡು ಯುವಕರು ಹಾಗೂ ಮುಖಂಡರೊಂದಿಗೆ ಬೆರೆತು ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ವಿಪಕ್ಷಗಳನ್ನು ಸಮರ್ಥವಾಗಿ ಎದುರಿಸಿದ ಅವರು, ಹೈಕಮಾಂಡ್ ನಿರ್ದೇಶನದಂತೆ ಕಳೆದ ಸರ್ಕಾರದಲ್ಲಿ ತಮ್ಮ ಮಂತ್ರಿಪದವಿಯನ್ನು ತ್ಯಾಗ ಮಾಡಿ ಪಕ್ಷದ ಕಾರ್ಯಾಧ್ಯಕ್ಷ ಹುದ್ದೆಯನ್ನು ವಹಿಸಿಕೊಂಡು ಪಕ್ಷ ಸಂಘಟನೆ ಮಾಡಿದ್ದರು. ಅವರಿಗೆ ಪ್ರಸ್ತುತ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಬೇಕು, ಇಲ್ಲದಿದ್ದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನಾದರೂ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.